ಷೇಕ್‍ಸ್ಪಿಯರ್, ವಿಲಿಯಮ್
	1564-1616. ಪ್ರಪಂಚವಿಖ್ಯಾತ ಇಂಗ್ಲಿಷ್ ನಾಟಕಕಾರ, ಕವಿ, ಸಾರ್ವತ್ರಿಕ, ಸಾರ್ವಕಾಲಿಕ ಮೌಲ್ಯಗಳುಳ್ಳ ನಾಟಕಗಳನ್ನು ರಚಿಸಿ ಪ್ರಪಂಚದ ಅತ್ಯಂತ ಶ್ರೇಷ್ಠ ನಾಟಕಕಾರರ ಪಂಕ್ತಿ ಯಲ್ಲಿ ಅಗ್ರಸ್ಥಾನವನ್ನು ಪಡೆದವನು. ದೇಶ, ಕಾಲ, ಭಾಷೆಗಳ ಮಿತಿಯನ್ನು ದಾಟಿರುವ ಅಮರ ಕೃತಿಗಳನ್ನು ರಚಿಸಿದ ಕೀರ್ತಿಶಾಲಿ.

	ಇವನು 1564 ಏಪ್ರಿಲ್ 23ರಂದು ಸ್ಟ್ರ್ಯಾಟ್ ಫರ್ಡ್ ಆನ್ ಏವನ್ ಎಂಬಲ್ಲಿ ಜನಿಸಿದ. ತಂದೆ ಜಾನ್ ಷೇಕ್‍ಸ್ಪಿಯರ್. ಚರ್ಮ, ಕೈ ಗವುಸು, ಮರ, ಧಾನ್ಯಗಳನ್ನು ಮಾರುತ್ತಿದ್ದ ವ್ಯಾಪಾರಿ. ತಾಯಿ ಮೇರಿ ಆರ್ಡೆನ್, ಆ ಪ್ರಾಂತದ ಗಣ್ಯ ಜಮೀನ್ದಾರನಾಗಿದ್ದ ರಾಬರ್ಟ್ ಆರ್ಡೆನ್‍ನ ಮಗಳು. ತಾತ ರಿಚರ್ಡ್‍ಷೇಕ್‍ಸ್ಪಿಯರ್ ಸ್ನಿಟರ್‍ಫೀಲ್ಡಿನಲ್ಲಿ (ಸ್ಟ್ರ್ಯಾಟ್‍ಫರ್ಡಿನ ಉತ್ತರಕ್ಕೆ 6 ಕಿಮೀ ದೂರದ ಒಂದು ಹಳ್ಳಿ) ಒಬ್ಬ ರೈತನಾಗಿದ್ದ. ಜಾನ್ ಷೇಕ್‍ಸ್ಪಿಯರ್ 1552ರ ಸುಮಾರಿಗೆ ಸ್ಟ್ರ್ಯಾಟ್‍ಫರ್ಡಿಗೆ ಬಂದು ರಾಬರ್ಟ್ ಆರ್ಡೆನ್‍ನ ಜಮೀನಿನಲ್ಲಿ ಸ್ವಲ್ಪ ಭಾಗವನ್ನು ಗೇಣಿಗೆ ತೆಗೆದು ಕೊಂಡು ಕೆಲಸಮಾಡುತ್ತ ಅಲ್ಲೇ ನೆಲೆಸಿದ. ಇವನ ಹೆಸರು ಪುರಸಭೆಯ 1552ರ ರಿಜಿಸ್ಟರ್‍ನಲ್ಲಿ ಹೆನ್ಲೆ ಸ್ಟ್ರೀಟ್‍ನಲ್ಲಿ ಕೈ ಗವಸು ವ್ಯಾಪಾರಿ ಎಂದು ದಾಖಲಾಗಿದೆ. ಇದೇ ಷೇಕ್‍ಸ್ಪಿಯರ್ ಮನೆತನಕ್ಕೆ ಸಂಬಂಧಿಸಿದ ಮೊದಲ ಅಧಿಕೃತ ಸ್ಥಳೀಯ ದಾಖಲೆ.

	ಸ್ಟ್ರ್ಯಾಟ್‍ಫರ್ಡ್ ವಾರ್‍ವಿಕ್‍ಷೈರಿಗೆ ಸೇರಿದ್ದು ಲಂಡನ್ನಿನ ಪಶ್ಚಿಮಕ್ಕೆ 147 ಕಿಮೀ ದೂರದಲ್ಲಿ ಏವನ್ ಹೊಳೆಯ ದಂಡೆಯ ಮೇಲಿರುವ ಊರು. ಆ ಕಾಲಕ್ಕೆ ಲಂಡನ್ನಿಗಿಂತ ಹೆಚ್ಚು ಪ್ರಾಶಸ್ತ್ಯ ಪಡೆದಿತ್ತು. ಊರಿನಲ್ಲಿ ಎರಡಂತಸ್ತಿನ ಮನೆಗಳಿಂದ ಕೂಡಿದ ಪೇಟೆ ಬೀದಿಗಳು, ಒಂದು ಚರ್ಚು, ಒಂದು ಗ್ರಾಮರ್ ಸ್ಕೂಲು, ಮುನಿಸಿಪಾಲಿಟಿ (ಪೌರಸಭೆ) ಇದ್ದುವು. ಸುತ್ತುಮುತ್ತ ಹೊಲ, ಗದ್ದೆ, ತೋಟಗಳು, ಹಸುರು ಹುಲ್ಲುಗಾವಲು ಬಯಲುಗಳು, ಪಕ್ಕದಲ್ಲೇ ಹರಿಯುವ ಚೆಲುವಾದ ಹೊಳೆ. ಈತ ಹುಟ್ಟಿ ಬೆಳೆದದ್ದು ಈ ಪರಿಸರದಲ್ಲಿ. 1552ರ ಹೊತ್ತಿಗಾಗಲೇ ಸ್ಟ್ರ್ಯಾಟ್‍ಫರ್ಡ್‍ನ ಹಳೆಯ ಗಿಲ್ಡ್ ಪದ್ಧತಿ ಹೋಗಿ ಹೊಸ ಪೌರಸಭೆ ರಚಿತವಾಗಿತ್ತು. ಶಾಲಾಮಾಸ್ತರರಿಗೂ ಚರ್ಚಿನ ಪಾದ್ರಿಗೂ ಪೌರಸಭೆ ಸಂಬಳವನ್ನು ನಿಗದಿಮಾಡಿತ್ತು. ಹಳೆಯಶಾಲೆಗೆ ಕಿಂಗ್ಸ್ ನ್ಯೂ ಸ್ಕೂಲ್ ಆ¥sóï ಸ್ಟ್ರ್ಯಾಟ್‍ಫರ್ಡ್ ಅಪಾನ್ ಏವನ್ ಎಂದು (ಆಳುತ್ತಿದ್ದ 6ನೆಯ ಎಡ್ವರ್ಡ್ ದೊರೆಗೂ ಇದಕ್ಕೂ ಏನು ಸಂಬಂಧವಿರದಿದ್ದರೂ ದೊರೆಯ ಹೆಸರನ್ನಿಟ್ಟು) ಎಂದು ಹೊಸ ನಾಮಕರಣ ಮಾಡಲಾಯಿತು.

	ರಾಬರ್ಟ್ ಆರ್ಡೆನ್‍ನ ಮಗಳು ಮೇರಿಯನ್ನು ಜಾನ್ ಷೇಕ್‍ಸ್ಪಿಯರ್ ಮದುವೆಯಾದ. ಆರ್ಡೆನ್ ಕುಟುಂಬ ವಾರ್‍ವಿಕ್‍ಷೈರಿಗೆ ಸೇರಿದ ಎಲ್ಮ್‍ಕೋಟ್‍ನ ಗಣ್ಯ ಮನೆತನವಾಗಿದ್ದು ಮೇರಿ ಮನೆಯವರು ಹೆಚ್ಚು ಸ್ಥಿತಿವಂತರಾಗಿದ್ದರು. ಅಂಥಲ್ಲಿ ಮದುವೆಯಾದುದರಿಂದ ಜಾನ್‍ನ ಸ್ಥಾನಮಾನ ಹೆಚ್ಚಿದುವು. ಹೆಂಡತಿಯ ಕಡೆಯಿಂದ ಆಸ್ತಿಯೂ ಬಂದಿತು.

	ಈ ದಂಪತಿಗಳಿಗೆ ಎಂಟು ಜನ (ನಾಲ್ಕು ಗಂಡು, ನಾಲ್ಕು ಹೆಣ್ಣು) ಮಕ್ಕಳು. ಮೊದಲು ಎರಡು ಹೆಣ್ಣು ಮಕ್ಕಳಾದಮೇಲೆ ಹುಟ್ಟಿದವನು ಷೇಕ್‍ಸ್ಪಿಯರ್. ಇವನೇ ಮೊದಲ ಗಂಡುಮಗು. 26 ಏಪ್ರಿಲ್ 1564 ರಂದು ನಾಮಕರಣ, ಧರ್ಮ ದೀಕ್ಷೆ ಆದುವು. ಈ ಸಂಗತಿ ಜಿಲ್ಲಾ ಉಪವಿಭಾಗೀಯ ಚರ್ಚಿನ ನೋಂದಣಿ ಪುಸ್ತಕದಲ್ಲಿ ನಮೂದಿತ ವಾಗಿದೆ. ಈತನ ಜನನದ ಸಂದರ್ಭದಲ್ಲಿ ಸುತ್ತುಮುತ್ತಲ ಪ್ರದೇಶಗಳಲ್ಲಿ ಭೀಕರ ಪ್ಲೇಗ್ ಹರಡಿತ್ತು. ಪ್ಲೇಗಿನ ಬಾಧೆ ತಾಗದೆ ಈತ ಬದುಕಿಕೊಂಡ. ಜೋನ್ ಎಂಬ ಸೋದರಿಯ ಹೊರತು ಉಳಿದ ಸೋದರ, ಸೋದರಿ ಯರೆಲ್ಲ ಮುಂಚೆಯೇ ತೀರಿಕೊಂಡರು. ಆಸ್ತಿಯಲ್ಲಿ ಸೋದರಿ ಜೋನ್‍ಳಿಗೂ ಕೊಂಚ ಪಾಲನ್ನು ಕೊಟ್ಟಿರುವ ವಿಚಾರ ಇವನ ಉಯಿಲಿನಲ್ಲಿ ದಾಖಲಾಗಿದೆ.

	ಈತ ಹುಟ್ಟುವ ಕಾಲಕ್ಕೆ ಜಾನ್ ಷೇಕ್‍ಸ್ಪಿಯರ್ ಪ್ರವರ್ಧಮಾನ ಸ್ಥಿತಿಯಲ್ಲಿದ್ದ. ಸ್ವಲ್ಪ ಜಮೀನಿದ್ದು ಬೇಸಾಯ ಮಾಡಿಸುತ್ತಿದ್ದ. ಪ್ರಧಾನ ವೃತ್ತಿ ವ್ಯಾಪಾರ. ವ್ಯಾಪಾರದಿಂದ ಸಾಕಷ್ಟು ಲಾಭ ಬರುತ್ತಿತ್ತು. ಹಣವಂತನಾಗುತ್ತ ಊರಿನ ಗಣ್ಯ ವ್ಯಕ್ತಿಯಾದ. ಮದುವೆಯಾದ ವರ್ಷವೇ ಪುರಸಭೆಯ ಸದಸ್ಯನಾಗಿ ಚುನಾಯಿತನಾದ. ಸಕ್ರಿಯ ಕಾರ್ಯಕರ್ತನೂ ಆಗಿದ್ದ. 4 ವರ್ಷ ಕಾಲ ಚೇಂಬರ್ಲೇನ್‍ನಾಗಿದ್ದ. 1565ರಲ್ಲಿ ಆಲ್ಡರ್‍ಮನ್, 1568ರಲ್ಲಿ ಬೇಲಿಫ್ (ಮೇಯರ್‍ಗೆ ಸಮನಾದ ಹುದ್ದೆ) ಸ್ಥಾನವನ್ನಲಂಕರಿಸಿದ. 1577ರ ವರೆಗೂ ಪುರಸಭೆಯ ಪ್ರಭಾವಶಾಲಿ ವ್ಯಕ್ತಿಯಾಗಿದ್ದ. ಷೇಕ್‍ಸ್ಪಿಯರನ ವಿದ್ಯಾಭ್ಯಾಸ ಗ್ರಾಮರ್ ಸ್ಕೂಲಿನಲ್ಲಾಯಿತು. ಶಾಲೆಯಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನೂ ಕಲಿಸುತ್ತಿದ್ದರು. ಇವನಿಗೆ ಗ್ರೀಕ್ ಮತ್ತು ಲ್ಯಾಟಿನ್ ಚೆನ್ನಾಗಿ ಓದುವಷ್ಟರಮಟ್ಟಿಗಾದರೂ ಬಂದಿರಬೇಕು. ಏಕೆಂದರೆ ಮುಂದೆ ಈತ ತನ್ನ ಹಲವು ನಾಟಕಗಳ ವಸ್ತುಗಳನ್ನು ಓವಿಡ್, ಸೆನೆಕ, ಪ್ಲಾಟಸ್ ಮುಂತಾದವರ ಕೃತಿಗಳಿಂದ ಆರಿಸುವಾಗ ಮೂಲ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲೇ ಓದಿರಬೇಕೆಂದು ಇವನ ನಾಟಕಗಳಿಂದ ಊಹಿಸ ಬಹುದಾಗಿದೆ. ಗ್ರಾಮರ್‍ಸ್ಕೂಲಿನಲ್ಲಿ ದೊರೆಯುವಷ್ಟು ಶಿಕ್ಷಣವನ್ನು ಈತ ಪಡೆದಿರಬೇಕು. ಇವನಿಗೆ ಹದಿಹರೆಯ ಬರುವ ವೇಳೆಗೆ ತಂದೆಯ ಶುಭದೆಸೆ ಇಳಿಮುಖವಾಗತೊಡಗಿತ್ತು. ಆರ್ಥಿಕ ಮುಗ್ಗಟ್ಟಿಗೊಳಗಾಗಿ ಮಾಡಿದ ಸಾಲ ಸೋಲ, ಕೆಲವು ಪೌರ ಅಪರಾಧಗಳಿಗೆ ತೆರಬೇಕಾದ ದಂಡ, ಜೊತೆಗೆ ವ್ಯಾಪಾರವೂ ಕುಂಠಿತವಾಗಿ ವರಮಾನ ತಗ್ಗಿದುದು ಹೀಗೆ ಎಲ್ಲವೂ ಕೂಡಿಕೊಂಡವು. ಈ ಸಂದರ್ಭದಲ್ಲಿ ಮಗ ತಂದೆಗೆ ವ್ಯಾಪಾರದಲ್ಲಿ ನೆರವಾಗುವುದರಲ್ಲಿ ಹೆಚ್ಚು ಕಾಲ ಕಳೆಯಬೇಕಾಯಿತು. ಶಾಲೆಯ ನಿಯಮಿತ ವಿದ್ಯಾಭ್ಯಾಸಕ್ಕೆ ಅಡಚಣೆಗಳು ಹೆಚ್ಚಾಗಿರಬೇಕು. ದೊರೆತಿರುವ ಲಿಖಿತ ದಾಖಲೆಗಳಲ್ಲಿ ಬ್ಯಾಪ್ಟಿಸಂನ ದಿನಾಂಕವೂ ಒಂದು. ಇನ್ನೊಂದರಲ್ಲಿ ಷೇಕ್‍ಸ್ಪಿಯರ್ ಮತ್ತು ಆ್ಯನಿ ಹ್ಯಾಥವೇ ಇವರ ಮದುವೆಗೆ ಬಿಷಪ್‍ನ ಅಪ್ಪಣೆ ದೊರೆತು(ಲೈಸನ್ಸ್) 1582 ನವೆಂಬರ್ 28ರಂದು ಮದುವೆಯಾಯಿತೆಂದು ನಮೂದಿಸಲ್ಪಟ್ಟಿದೆ. ಈ ಮದುವೆಗೆ ಅಪ್ಪಣೆ ದೊರಕಿರುವುದು ವಿಶೇಷ ಸಂದರ್ಭದಲ್ಲಿ ಕೊಡಬಹುದಾದಂತಹ ಅಪ್ಪಣೆ. ಊರಿನ ರೈತರಾಗಿದ್ದ ಷ್ಯಾಂಡಲ್ಸ್ ಮತ್ತು ರಿಚರ್ಡ್‍ಸನ್ ಎಂಬಿಬ್ಬರು ಇನ್ನೂ ಅಪ್ರಾಪ್ತ ವಯಸ್ಕನಾಗಿದ್ದ (ಷೇಕ್‍ಸ್ಪಿಯರ್‍ಗೆ ಆಗ ಹದಿನೆಂಟುವರೆ ವರ್ಷ) ಷೇಕ್‍ಸ್ಪಿಯರ್‍ಗೆ ಜಾಮೀನಾಗಿ ನಿಂತು ಬಿಷಪ್‍ರಿಂದ ವಿಶೇಷ ಅನುಮತಿ ಪಡೆದು ತರಾತುರಿಯಲ್ಲಿ ಮದುವೆಮಾಡಿ ಮುಗಿಸಿದರು. ವುರ್ಸೆಸ್ಟರ್ ಚರ್ಚಿನ ರಿಜಿಸ್ಟರ್‍ನಲ್ಲಿ ಮದುವೆ ನಡೆದ ದಾಖಲೆ ಇದೆ. ಆ್ಯನಿ, ಸ್ಟ್ರ್ಯಾಟ್‍ಫರ್ಡಿಗೆ 3 ಕಿಮೀ ದೂರದ ಹಳ್ಳಿಯವಳು. ಷೇಕ್‍ಸ್ಪಿಯರ್ ಗಿಂತ 8 ವರ್ಷ ದೊಡ್ಡವಳು (ಷೇಕ್‍ಸ್ಪಿಯರ್ ನಿಧನನಾದ ಮೇಲೆ ಏಳುವರೆವರ್ಷಕಾಲ ಬದುಕಿದ್ದು 1623ರಲ್ಲಿ ನಿಧನಳಾದಳು). ಮದುವೆ ಯಾದ ಆರು ತಿಂಗಳಲ್ಲಿ ಈಕೆ 1583 ಮೇ 26ರಂದು ಹೆಣ್ಣುಮಗುವನ್ನು ಹೆತ್ತಳು. ಎರಡೂ ಕಡೆಯ ಹಿರಿಯರು ಅಷ್ಟು ತರಾತುರಿಯಲ್ಲಿ ಆ ಮದುವೆಯನ್ನು ಮಾಡಿದುದರ ಕಾರಣ ತಿಳಿಯುತ್ತದೆ. ಮಗುವಿಗೆ ಸುಸಾನ್ನಾ ಎಂದು ಹೆಸರಿಟ್ಟರು. 1585 ಫೆಬ್ರವರಿ 2ರಂದು ಅವಳಿಜವಳಿ ಮಕ್ಕಳಾದವು-ಒಂದು ಗಂಡು, ಒಂದು ಹೆಣ್ಣು. ಗಂಡು ಮಗು ಹ್ಯಾಮ್ನೆಟ್ 11ನೆಯ ವರ್ಷದಲ್ಲಿ ತೀರಿಹೋದ, ಮಗಳು ಜೂಡಿತ್ ಬಹುಕಾಲ ಬದುಕಿದ್ದಳು.

	ಈತನ ಬಾಲ್ಯ-ಯೌವನಗಳ ಉಳಿದ ಯಾವ ವಿಚಾರಗಳೂ ಅಧಿಕೃತವಾಗಿ ತಿಳಿದಿಲ್ಲ. ಊರು ಬಿಟ್ಟು ಲಂಡನ್ನಿಗೆ ಹೋದುದು ಸುಮಾರು 1585-87 ಸುಮಾರಿಗೆ. ನೆರೆಯ ಸರ್‍ಥಾಮಸ್ ಲೂಸಿಯ ವನದಲ್ಲಿ ಜಿಂಕೆಯನ್ನು ಕದ್ದ ಆರೋಪವೊಂದು ಈತ ಹೇಳದೆ ಕೇಳದೆ ಊರು ಬಿಟ್ಟು ಓಡಿಹೋಗಲು ಕಾರಣವೆಂಬ ವದಂತಿಯಿದೆ. ಅಪರಾಧಕ್ಕೆ ಶಿಕ್ಷೆಯೂ ಆಯಿತು. ಅನಂತರ ಈತ ತನ್ನ ಬರೆಹವೊಂದರಲ್ಲಿ ಲೇವಡಿ ಮಾಡಿರುವುದು ಇದೇ ಸರ್ ಥಾಮಸ್ ಲೂಸಿಯನ್ನೇ ಎಂಬ ವಾದವೂ ಇದೆ. ಇದೆಲ್ಲ ನಿರಾಧಾರವಾದ ಕಥೆ ಎಂದು ಹೇಳುವ ವಾದವೂ ಇದೆ. ಈತ ಊರುಬಿಟ್ಟು ಹೋದುದಕ್ಕೆ ಸ್ಪಷ್ಟವಾದ ಯಾವ ಕಾರಣಗಳೂ ದಾಖಲೆಗಳೂ ಲಭ್ಯವಿಲ್ಲ.

	1592ರ ಸುಮಾರಿಗೆ ಈತ ಲಂಡನ್ನಿನ ನಾಟಕ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ವಿಚಾರ ಸ್ಟ್ರ್ಯಾಟ್‍ಫರ್ಡ್‍ಗೆ ತಿಳಿದು ಬಂದಿತು. ಈತ ಕುದುರೆಗಳ ಮೇಲುಸ್ತುವಾರಿ ನೋಡಿಕೊಳ್ಳುವುದರ ಜೊತೆಗೆ ನಾಟಕಗಳನ್ನು ಪ್ರತಿಮಾಡುತ್ತ, ರಂಗದ ಮೇಲೂ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ. ಅನಂತರ ಕೆಲವು ಕಾಲ ಸ್ವತಂತ್ರ ನಾಟಕಕಾರನಾಗಿ ಹಲವರ ಗಮನ ಸೆಳೆದು ಪ್ರಖ್ಯಾತನಾಗುತ್ತಿರುವ ವಿಚಾರ ಮೊದಲು ಪ್ರಕಟವಾದುದು ರಾಬರ್ಟ್ ಗ್ರೀನ್ ಎಂಬ ಹಿರಿಯ ಸಮಕಾಲೀನ ನಾಟಕ ಕಾರನಿಂದ. ಷೇಕ್‍ಸ್ಪಿಯರ್ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಜನಪ್ರಿಯತೆ ಯನ್ನೂ ಕೀರ್ತಿಯನ್ನೂ ಗಳಿಸುತ್ತಿರುವುದನ್ನು ಗಮನಿಸಿದ ಆತ ಕರುಬಿ ಅಸಹನೆಯಿಂದ ಈ ಹೊಸಬನನ್ನು ಅವಹೇಳನಮಾಡಿ ತನ್ನ ಪರಿಚಿತ ನಾಟಕಕಾರರಿಗೆ ಬರೆದ ಪತ್ರದಲ್ಲಿ, “ಪ್ರತಿಭಾಶಾಲಿಯಾದ ನಾಟಕ ರಚನಕಾರನಿಗೆ ಸಾಕಷ್ಟು ಗೌರವವಾಗಲಿ ಸಂಭಾವನೆಯಾಗಲಿ ಇಲ್ಲ, ನಾಟಕ ಕಂಪನಿಗಳ ಮಾಲೀಕರು ಮತ್ತು ನಟರು ಚೆನ್ನಾಗಿ ಹಣ ಮಾಡುತ್ತಾರೆ, ಹೆಸರೂ ಮಾಡುತ್ತಾರೆ. ಇಂತಹ ಶೋಷಕರಿಂದ ನನಗೆ ಈ ದುಸ್ಥಿತಿ ಒದಗಿತು. ಬಡತನದ ಬವಣೆಗೆ ಸಿಕ್ಕು ಕಾಯಿಲೆ ಬಿದ್ದು ನಾನೀಗ ಸಾಯುವ ಸ್ಥಿತಿಯಲ್ಲಿದ್ದೇನೆ. ಇದನ್ನು ನೋಡಿಯಾದರೂ ಪಾಠ ಕಲಿಯಿರಿ. ನಾಟಕ ಆಡಿಸುವವರ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸಿರಿ. ನಂಬಿ ಮೋಸಹೋಗಬೇಡಿರಿ. ಏಕೆಂದರೆ ಅವರಲ್ಲಿ ಇತ್ತೀಚೆಗಷ್ಟೆ ಸೇರಿ ಅವರಿವರ ಕುಮ್ಮಕ್ಕಿನಿಂದ ಮೇಲೆ ಬಂದು ನಮ್ಮ ಗರಿಗಳಿಂದಲೇ ಅಲಂಕಾರ ಮಾಡಿಕೊಂಡು ಮೆರೆಯುತ್ತಿರುವ ಕಾಗೆಯೂ ಇದೆ. ಮೇಲೆ ನಟನ ದೇಹ. ಒಳಗೆ ಹುಲಿಯ ಹೃದಯ. ನಿಮ್ಮಲ್ಲಿ ಬಹಳ ಶ್ರೇಷ್ಠರೆನಿಸಿಕೊಂಡವರಿಗಿಂತ ಸೊಗಸಾಗಿ ಮುಕ್ತರಗಳೆಯಲ್ಲಿ ಉಗ್ಗಡಿಸಬಲ್ಲೆ ಎಂದು ತಿಳಿದುಕೊಂಡಿದ್ದಾನೆ. ಎಲ್ಲದರಲ್ಲೂ ತಾನೇ ಪರಮ ಪ್ರವೀಣನಾಗಿರುವುದರಿಂದ ದೇಶಕ್ಕೆಲ್ಲ ತಾನೇ ಏಕೈಕ ಷೇಕ್‍ಸೀನ್(ನಾಟಕ ಸಾಮ್ರಾಟ) ಎಂದು ಅಹಂಭಾವದಿಂದ ಭ್ರಮೆ ಕಟ್ಟಿಕೊಂಡಿದ್ದಾನೆ” ಎಂದು ಉಲ್ಲೇಖಿಸಿದ್ದಾನೆ. ಇದು ಷೇಕ್‍ಸ್ಪಿಯರ್‍ನನ್ನು ಕುರಿತೇ ಆಡಿದ ಮಾತು ಎನ್ನುವುದಕ್ಕೆ ಎರಡು ಮೂರು ಪ್ರಮಾಣಗಳನ್ನು ಗುರುತಿಸಬಹುದು. “ನಟನ ಚರ್ಮ ಹೊದ್ದ ಹುಲಿ ಹೃದಯ” ಎಂಬರ್ಥದ ಮಾತು ಈತ ಈ ಒಂದೆರಡು ವರ್ಷಗಳಿಗೆ ಮುಂಚೆ ಬರೆದ ಹೆನ್ರಿ ದ ಸಿಕ್ಸ್‍ತ್‍ನ ಮೂರನೆಯ ಭಾಗದಲ್ಲಿ ಬರುವ “ಹೆಣ್ಣು ಚರ್ಮಹೊದ್ದ ವ್ಯಾಘ್ರ ಹೃದಯ” ಎಂಬ ಪದಪುಂಜದ ಪ್ರತಿಫಲನ ವಾಗಿದೆ. ಷೇಕ್‍ಸೀನ್ ಎಂಬಲ್ಲಿನ ಷೇಕ್, ಈತನ ಹೆಸರನ್ನೇ ಅಣಕಿಸಿ ಮಾಡಿದ ವ್ಯಂಗ್ಯ ಎಂಬುದು ಸುಸ್ಪಷ್ಟ. ಮುಕ್ತ ಛಂದಸ್ಸು ಅಥವಾ ರಗಳೆಯ ಪ್ರಯೋಗದಲ್ಲಿ ಈತ ಶ್ರೇಷ್ಠತೆಯನ್ನು ಸ್ಥಾಪಿಸಿರುವುದು ವಿಮರ್ಶಕರ ಗಮನಕ್ಕೆ ಆಗಲೆ ಬಂದಿತ್ತು. ಕಿರಿಯ ಪ್ರಾಯದ ಈತ ನಾಟಕರಂಗವನ್ನು ಪ್ರವೇಶಿಸಿ ಇನ್ನೂ ಏಳೆಂಟು ವರ್ಷ ಸಹ ಆಗಿರಲಿಲ್ಲ. 

	ಗ್ರೀನ್ ತೀರಿಕೊಂಡಮೇಲೆ ಹೆನ್ರಿ ಷಟಲ್ ಎಂಬಾತ ಅವನ ಕೆಲವು ಬರೆಹಗಳನ್ನು ಸಂಕಲಿಸಿ “ಗ್ರೀನ್ಸ್‍ಗ್ರೋಟ್ಸ್ ವರ್ತ್ ಆಫ್ ವಿಟ್ ಬಾಚ್ ವಿಥ್ ಎ ಮಿಲಿಯನ್ ಆಫ್ ರಿಪೆಂಟೆನ್ಸ್” ಎಂಬ ಶೀರ್ಷಿಕೆಯ ಕಿರುಪುಸ್ತಕ ಪ್ರಕಟಿಸಿದ. ಅದರಲ್ಲಿ ಮೇಲಿನ ಕಾಗದವೂ ಸೇರಿತ್ತು. ಗ್ರೀನ್ ಮತ್ತು ಷೇಕ್‍ಸ್ಪಿಯರ್ ಈ ಇಬ್ಬರು ಸ್ನೇಹಿತರಿಗೂ ಈ ಪತ್ರದಲ್ಲಿನ ನ್ಯಾಯವಲ್ಲದ ಟೀಕೆಯಿಂದ ಅಸಮಾಧಾನವಾಯಿತು. ಗ್ರೀನ್‍ನ ಮಿತ್ರ ಕ್ರಿಸ್ಟೋಫರ್ ಮಾರ್ಲೋ ಸಹ ಬೇಸರ ವ್ಯಕ್ತಪಡಿಸಿದ. ಮೂರು ತಿಂಗಳ ಬಳಿಕ ಷಟಲ್ ಕೈಂಡ್ ಹಾಟ್ರ್ಸ್ ಡ್ರೀಮ್ ಎಂಬ ತನ್ನ ಪುಸ್ತಕದ ಮುನ್ನುಡಿಯಲ್ಲಿ ಗ್ರೀನ್‍ನ ಟೀಕೆ ಅಸಮರ್ಥನೀಯವೆಂದು ವಿವರಿಸಿ ಕ್ಷಮಾಯಾಚನೆ ಮಾಡಿದ. ಇಷ್ಟೇ ಅಲ್ಲದೆ ಷೇಕ್‍ಸ್ಪಿಯರ್‍ನ ನೇರ ಹಾಗೂ ಪ್ರಾಮಾಣಿಕ ವ್ಯವಹಾರ, ಸಭ್ಯ ನಡೆವಳಿಕೆಗಳನ್ನೂ ಆತನ ನಾಟಕ ರಚನಾಕಲೆಯನ್ನು ಶ್ರೇಷ್ಠಗೊಳಿಸಿರುವ ಸುಂದರವಾದ ಶೈಲಿಯನ್ನೂ ಪ್ರಶಂಸಿಸಿ ಬರೆದ. ಈ ಮಾತುಗಳಿಂದ ಷೇಕ್‍ಸ್ಪಿಯರ್ ಬಗ್ಗೆ ಆಸ್ಥಾನಿಕರೂ ಶ್ರೀಮಂತರೂ ಸೇರಿದ ಶಿಷ್ಟ ಸಮಾಜದಲ್ಲಿ ಆಗಲೆ ಗೌರವವಿದ್ದಿತೆಂದು ವ್ಯಕ್ತವಾಗುತ್ತದೆ. ಷೇಕ್‍ಸ್ಪಿಯರ್‍ನಿಗೆ ವಿದ್ವಾಂಸರ, ಆಸ್ಥಾನಿಕರ ನಿಕಟ ಒಡನಾಟವೂ ಇತ್ತು ಎಂಬುದು `ಲವ್ಸ್ ಲೇಬರ್ ಲಾಸ್ಟ್ ಎಂಬ ನಾಟಕದಲ್ಲಿ ಬರುವ ಅನೇಕ ಸನ್ನಿವೇಶಗಳಿಂದ, ಮಾತುಗಳಿಂದ ಗೊತ್ತಾಗುತ್ತದೆ.

	1592ರ ವೇಳೆಗೆ ಕಾಮೆಡಿ ಆಫ್ ಎರರ್ಸ್, ಟೇಮಿಂಗ್ ಆಫ್ ದ ಷ್ರೂ, ಟೂ ಜೆಂಟ್ಲ್‍ಮೆನ್ ಆಫ್ ವೆರೋನ ಎಂಬ ಮೂರು ಹರ್ಷಕ ಗಳನ್ನೂ ಟೈಟಸ್ ಆಂಡ್ರೋನಿಕಸ್ ಎಂಬ ಒಂದು ರುದ್ರನಾಟಕವನ್ನೂ ಹೆನ್ರಿ ದ ಸಿಕ್ಸ್‍ತ್ (ಭಾಗ 1,2,3), ರಿಚರ್ಡ್ ದ ಥರ್ಡ್; ಕಿಂಗ್ ಜಾನ್ ಎಂಬ ಮೂರು ಐತಿಹಾಸಿಕ ನಾಟಕಗಳನ್ನೂ ರಚಿಸಿದ್ದ. ಇವು ರಂಗಭೂಮಿಯ ಮೇಲೆ ಪ್ರದರ್ಶಿತವಾಗಿ ಉದಯೋನ್ಮುಖ ನಾಟಕ ಕಾರನಿಗೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿದ್ದವು, ಆದರೆ ಮುದ್ರಣ ಗೊಂಡಿರಲಿಲ್ಲ. ಮುದ್ರಣಗೊಂಡು ಪ್ರಕಟವಾದ ಮೊದಲ ಕೃತಿ ವೀನಸ್ ಅ್ಯಂಡ್ ಅಡೋನಿಸ್ ಎಂಬ ಕಾವ್ಯ(1593). ಅನಂತರ 1594ರಲ್ಲಿ ರೇಪ್ ಆಫ್ ಲೂಕ್ರೀಸ್ ಎಂಬ ಮತ್ತೊಂದು ಕಾವ್ಯ ಪ್ರಕಟವಾಯಿತು. ಈ ಎರಡು ಕೃತಿಗಳೂ ನಾಟಕರಂಗದಲ್ಲಾಗಲೆ ಹೆಸರಾದ ಲೇಖಕನೇ ರಚಿಸಿದ ಕಾವ್ಯಗಳೆಂದು ವಾಚಕರು ಉತ್ಸಾಹದಿಂದ ಸ್ವಾಗತಿಸಿದರು. ಈತ ಪ್ರತಿಭಾವಂತ ನಾಟಕಕಾರನಾಗಿರುವಂತೆ ಶ್ರೇಷ್ಠ ಕವಿಯೂ ಆಗಿರುವನೆಂಬುದನ್ನು ಈ ಕಾವ್ಯಗಳು ಸಾರಿದವು.

	ಸ್ಟ್ರ್ಯಾಟ್‍ಫರ್ಡ್‍ಅನ್ನು ಬಿಟ್ಟು ಹೋದಮೇಲೆ ಅಂದರೆ 1583ರಿಂದ 1592ರವರೆಗಿನ ಕಾಲದ ಈತನ ಜೀವನದ ಯಾವ ಸಂಗತಿಗಳೂ ಐತಿಹಾಸಿಕವಾಗಿ ದಾಖಲಾಗಿಲ್ಲ. ಈ ಕಾಲದಲ್ಲಿ ಏಳು ನಾಟಕಗಳನ್ನು ಬರೆದನೆಂಬುದು ಮಾತ್ರ ತಿಳಿದುಬರುತ್ತದೆ. ಆದರೆ ಮೊದಲು ನಾಟಕರಂಗಕ್ಕೆ ಬಂದುದು ಹೇಗೆ, ಯಾವಾಗ; ಇವನು ಬರೆದ ಮೊದಲ ನಾಟಕ ಯಾವುದು, ಯಾವಾಗ ಅದನ್ನು ಬರೆದ ಎಂಬಿತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಸ್ಟ್ರ್ಯಾಟ್‍ಫರ್ಡ್‍ನ್ನು ಬಿಡುವ ಮೊದಲು ಕೆಲವು ಸ್ಥಳೀಯ ಶಾಲೆಯಲ್ಲಿ ಶಿಕ್ಷಕನಾಗಿದ್ದಿರಬಹುದು ಎಂದೂ ತಂದೆಯ ವ್ಯಾಪಾರ ಬಿದ್ದುಹೋಗಿ ಬರುತ್ತಿದ್ದ ವರಮಾನ ಸಾಕಾಗದೇ ಹೋದುದು ಮತ್ತು ಸುಪ್ತವಾಗಿದ್ದ ಸಾಹಿತ್ಯದ ತುಡಿತವೂ ಜೊತೆಗೂಡಿ, ಭಾಗ್ಯವನ್ನರಸಿ ಲಂಡನ್ನಿಗೆ ಹೋಗಿರಬಹುದೆಂದೂ ಊಹೆ. ಲಂಡನ್ನಿನ ನಾಟಕ ಕಂಪನಿಯೊಂದರಲ್ಲಿದ್ದಾಗಲೇ ಇವನ ವಿಚಾರ ಬೆಳಕಿಗೆ ಬಂದದ್ದು. ಲಂಡನ್ನಿಗೆ ಹೋದ ಆರಂಭದಲ್ಲಿ ಯಾವ ಯಾವ ಉದ್ಯೋಗದಲ್ಲಿದ್ದನೊ ತಿಳಿಯದು. ಶಿಕ್ಷಕನಾಗಿದ್ದ, ಲಾಯರ್ ಬಳಿ ಗುಮಾಸ್ತನಾಗಿದ್ದ, ದಂಡು ಸೇರಿ ಯೋಧನಾಗಿದ್ದ, ಮುದ್ರಣಶಾಲೆಯೊಂದರಲ್ಲಿ ಕೆಲಸದಲ್ಲಿದ್ದ, ಸಂಚಾರ ಮೋಹವೂ ಇದ್ದುದರಿಂದ ನಿರುದ್ಯೋಗಿಯಾಗಿ ದೇಶವನ್ನು ಸುತ್ತಿದ ಎಂದು ಊಹಿಸಲಾಗಿದೆ. ಸತ್ಯಸಂಗತಿ ಮಾತ್ರ ಗೊತ್ತಿಲ್ಲ. ಹಿಂದೊಮ್ಮೆ ಎರಡು ಪ್ರವಾಸಿ ನಾಟಕ ತಂಡಗಳು ಸ್ಟ್ರ್ಯಾಟ್‍ಫರ್ಡ್‍ನಲ್ಲಿ ಕೆಲವು ಕಾಲ ತಂಗಿ ನಾಟಕಗಳನ್ನು ಪ್ರದರ್ಶಿಸಿದಾಗ ಈತ ಇನ್ನೂ ಚಿಕ್ಕ ಹುಡುಗ. ತಂದೆ ಜಾನ್ ಪುರಸಭೆಯ ಅಧಿಕಾರಿ. ನಾಟಕ ತಂಡಗಳನ್ನು ಕರೆಸಿದ್ದೂ ಆತನೇ. ತಂದೆಯೊಡನೆ ಆ ನಾಟಕಗಳನ್ನು ನೋಡಿದ ಇವನಿಗೆ ನಾಟಕದ ಗೀಳು ಆಗಿನಿಂದಲೇ ಅಂಟಿಕೊಂಡಿರ ಬಹುದು. ಉದ್ಯೋಗವನ್ನರಸಿ ಲಂಡನ್ನಿಗೆ ಹೋದಾಗ ಮೊದಮೊದಲು ಯಾವ ಕೆಲಸ ಸಿಕ್ಕಿತೊ ಬಿಟ್ಟಿತೊ ಅಂತೂ ಒಂದೆರಡು ವರ್ಷಗಳಲ್ಲಿ ನಾಟಕ ಮಂಡಲಿಯೊಂದರಲ್ಲಿ ಸಣ್ಣ ಕೆಲಸವೊಂದು ಇದೆಯೆಂದಾಗ ಅದೇ ಸದವಕಾಶವೆಂದು ಸೇರಿಕೊಂಡಿರಬೇಕು. ಕೆಲಸ ಕಡಿಮೆಯಿದ್ದು ಬಿಡುವು ಹೆಚ್ಚಾಗಿರಬೇಕು. ಉಚಿತವಾಗಿ ನಾಟಕಗಳನ್ನು ನೋಡುವ ಅವಕಾಶ, ಅನಂತರ ಸಣ್ಣಪುಟ್ಟ ಪಾತ್ರಗಳನ್ನು ಮಾಡುವುದು, ಓದು ಬರೆಹ ಬಲ್ಲವನೆಂದು ನಾಟಕಗಳ ಹಸ್ತಪ್ರತಿಗಳನ್ನು ನಕಲು ಮಾಡುವುದು, ನಟರಿಗೆ ಬಾಯಿಪಾಠ ಮಾಡಲು ಸಹಾಯಮಾಡುವುದು, ನಾಟಕ ಮಾತು ಹಾಗೂ ಸನ್ನಿವೇಶಗಳನ್ನು ನಿರ್ದೇಶಕರ ಅಪೇಕ್ಷೆಯಂತೆ ತಿದ್ದುವುದು - ಹೀಗೆ ತನಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಿರುವಾಗ ನಾಟಕದ ಅಂತರಂಗವನ್ನು ಚೆನ್ನಾಗಿ ಗ್ರಹಿಸಿರಬೇಕು. ಸುಪ್ತವಾಗಿದ್ದ ಸೃಜನಶೀಲತೆ ಅಭಿವ್ಯಕ್ತಿಗಾಗಿ ತುಡಿಯುತ್ತ ತನ್ನ ಓದಿಗೊಳಗಾದ ಕಥಾವಸ್ತುಗಳನ್ನು ನಾಟಕ ರೂಪಕ್ಕೆ ಪರಿವರ್ತಿಸತೊಡಗಿರುವ ಅವಕಾಶ ಹೆಚ್ಚು. ಮೊದಲನೆಯ ಎಲಿಜಬೆತ್ ರಾಣಿಯ ಆಳಿಕೆಯ ಕಾಲವನ್ನು ಇಂಗ್ಲಿಷ್ ಸಾಹಿತ್ಯ-ಕಲೆಗಳ ಸುವರ್ಣಯುಗವೆನ್ನಬಹುದು. ಕಾರ್ಯೋತ್ಸಾಹಿಗಳೂ ಸಾಹಸಪ್ರಿಯರೂ ಆದ ಜನತೆಗೆ ನಾಟಕ ಅತ್ಯಂತ ಜನಪ್ರಿಯವಾದ ಪ್ರದರ್ಶನ ಕಲೆಯಾಗಿತ್ತು. ಕಾರ್ಯಚಟುವಟಿಕೆಗಳಿಂದ ತುಂಬಿದ ಕಥೆ ರಂಗದ ಮೇಲೆ ದೃಶ್ಯ ರೂಪದಲ್ಲಿ ಕ್ಷಿಪ್ರಗತಿಯಲ್ಲಿ ತೊಡಕು ಸಂಘರ್ಷಗಳ ಸನ್ನಿವೇಶಗಳಲ್ಲಿ ಸುತ್ತಿಕೊಳ್ಳುತ್ತ ಬೆಳೆದು ರಸೋತ್ಕರ್ಷ ಮುಟ್ಟಿ ಮತ್ತೆ ಸುಲಲಿತವಾಗಿ ಸಿಕ್ಕುಗಳಿಂದ ಬಿಡಿಸಿಕೊಳ್ಳುವ ವಿಧಾನ ಬಹಳ ಪ್ರಿಯವಾದ ಮನರಂಜನೆಯಾಗಿತ್ತು.

	ನಾಟಕ ರಚನಾ ಕಲೆಯ ಶ್ರೇಷ್ಠ ಹಾಗೂ ಪರಿಪೂರ್ಣ ವಿಕಾಸವನ್ನು ಇವನ ಪ್ರತಿಭೆ ಸಾಧಿಸಿದ್ದು ಲೋಕೋತ್ತರ ಸಂಗತಿ. ಆ ಪ್ರತಿಭೆಗೆ ನಾಟಕ ಸಹಜವಾದ ಕಲಾಭಿವ್ಯಕ್ತಿಯ ಮಾಧ್ಯಮವಾಗಿತ್ತು. ಸಾಮಾನ್ಯ ಜನರಿಗಾಗಿ ರಂಗದ ಮೇಲೆ ಪ್ರದರ್ಶನವಾಗುವ ಸಾಧ್ಯತೆ ಅನುಕೂಲಗ ಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈತ ನಾಟಕಗಳನ್ನು ರಚಿಸಿದ. ತನ್ನ ಸಮಕಾಲೀನ ಯುಗದ ಮತ್ತು ಜನತೆಯ ನಾಡಿ ಮಿಡಿತವನ್ನು ಸಾಮಾನ್ಯ ಜನರ ಅಭಿರುಚಿ, ಸಾಂಸ್ಕøತಿಕ ಸಾಮಥ್ರ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ಹಾಗಾಗಿ ಜನಸಾಮಾನ್ಯರಲ್ಲಿ ಸುಪ್ತವಾಗಿದ್ದ ಸದಭಿರುಚಿಯನ್ನು ಜಾಗೃತಗೊಳಿಸಿ ಉನ್ನತ ಕಲ್ಪನೆ ಹಾಗೂ ಭಾವನಾವಿಲಾಸದ ಸೌಂದರ್ಯ ವನ್ನು ಅವರು ಮೆಚ್ಚುವ ಹಾಗೆ, ಶ್ರೇಷ್ಠದರ್ಜೆಯ ಕಾವ್ಯಕ್ಕೆ ಸಂತೋಷ ದಿಂದ ಸ್ಪಂದಿಸುವ ಹಾಗೆ ಆಕರ್ಷಕವಾದ ಕಥಾಸಂವಿಧಾನ, ಪಾತ್ರಚಿತ್ರಣ, ಭಾಷಾವೈಖರಿಗಳ ಮಧುರ ಸಮಾವೇಶದ ನಾಟಕಗಳನ್ನು ರಚಿಸಿದ.

	ಇಂಗ್ಲೆಂಡಿನಲ್ಲಿ ನಾಟಕಗಳು ಮೊದಲು ಆರಂಭವಾದುದು ಕ್ರೈಸ್ತ ಮಠಗಳ ಮತ್ತು ಮಂದಿರಗಳ ಆವರಣಗಳಲ್ಲಿ. ಹಬ್ಬ ಉತ್ಸವಗಳ ಸಂದರ್ಭದಲ್ಲಿ ದೈವಭಕ್ತಿ, ಧರ್ಮಶ್ರದ್ಧೆಗಳನ್ನು ಬೆಳೆಸಲೆಂದು ಬೈಬಲ್‍ನ ಪೌರಾಣಿಕ ಪ್ರಸಂಗಗಳನ್ನೆತ್ತಿಕೊಂಡು ಕಿರುನಾಟಕಗಳ ರೂಪದಲ್ಲಿ ಪ್ರದರ್ಶಿಸುವುದು ವಾಡಿಕೆಯಾಯಿತು. ಮಿಸ್ಟರಿ ಅಥವಾ ಲೋಕಾತೀತ ಶಕ್ತಿಗಳ ಕೈವಾಡಗಳಿರುವ ಕಥೆಗಳೇ ಆ ದೃಶ್ಯಗಳ ವಸ್ತು. ಅನಂತರ ಸಂತರ ಮಹಿಮೆ-ಪವಾಡಗಳನ್ನು ತೋರಿಸುವ ನಾಟಕಗಳು ರೂಪು ಗೊಂಡವು. ಇವು ಮಿರ್ಯಾಕಲ್ ನಾಟಕಗಳು ಎಂದು ಪ್ರಚಲಿತವಾದುವು. ಇವುಗಳಲ್ಲಿ ಕ್ರೈಸ್ತ ಧರ್ಮೋಪದೇಶಕ್ಕೆ ಪ್ರಾಧಾನ್ಯ. ಜನರಲ್ಲಿ ಧಾರ್ಮಿಕ ಪ್ರವೃತ್ತಿಯನ್ನುಂಟು ಮಾಡುವುದರ ಜೊತೆಗೆ ನೀತಿಯನ್ನೂ ಬೆಳೆಸುವ ಉದ್ದೇಶದಿಂದ ನೀತಿಪ್ರಧಾನ ನಾಟಕಗಳು ರಚಿತವಾದವು. ಸದ್ಗುಣ-ದುರ್ಗುಣಗಳನ್ನು ಸಂಕೇತಿಸುವ ಪಾತ್ರಗಳಿಗೆ ಆಯಾ ಗುಣಗಳೇ ಹೆಸರಾಗಿರುತ್ತಿದ್ದವು. ದೇವಗುಣ, ಅಸುರೀ ಗುಣಗಳ ನಡುವಿನ ಘರ್ಷಣೆ, ದೈವೀಗುಣದ ವಿಜಯದಲ್ಲಿ ಸಮರ ಮುಕ್ತಾಯವಾಗುತ್ತಿತ್ತು. ಇಂಥ ನಾಟಕಗಳ ನಡುವೆ ಸಂಬಂಧವಿರಲಿ ಇಲ್ಲದಿರಲಿ ಲಘು ಹಾಸ್ಯ ಪ್ರಧಾನವಾದ ಮನರಂಜನೆಯ ದೃಶ್ಯಗಳನ್ನೂ ಸೇರಿಸಲಾಗುತ್ತಿತ್ತು. ಈ ದೃಶ್ಯಗಳ ವಸ್ತು ವಾಸ್ತವ ಸಾಮಾಜಿಕ ಜೀವನಕ್ಕೆ ಸಂಬಂಧಿ üಸಿದ್ದಾಗಿರುತ್ತಿತ್ತು. ಈ ಮಧ್ಯಂತರ ಪ್ರಸಂಗಗಳೇ ಕ್ರಮೇಣ ವಿಸ್ತಾರಗೊಂಡು ಲೌಕಿಕ ಪ್ರಕರಣಗಳ ಕಿರುನಾಟಕಗಳಾದವು. ಆಗ ಚಾರಿತ್ರಿಕ ಘಟನೆಗಳೂ ಇವುಗಳ ವಸ್ತುಗಳಾದವು. ಅವುಗಳನ್ನು ಕ್ರಾನಿಕಲ್ ನಾಟಕಗಳೆಂದು ಕರೆಯತೊಡಗಿದರು. ಇವನ ಕಾಲಕ್ಕೆ ಸುಖಾಂತ ಇಲ್ಲವೆ ದುಃಖಾಂತ ಲೌಕಿಕ ಹಾಗೂ ಐತಿಹಾಸಿಕ ಕಥೆಗಳನ್ನು ನಿರೂಪಿಸುವ ನಾಟಕಗಳು ರೂಢಿಗೆ ಬಂದಿದ್ದವು. ಧಾರ್ಮಿಕ, ನೈತಿಕ ಉದ್ದೇಶಗಳು ಮರೆಯಾಗಿ ಮನರಂಜನೆ ಪ್ರಧಾನವಾದ, ಬೋಧನ ಗೌಣವಾದ ಪೂರ್ಣಾವಧಿ ನಾಟಕಗಳು ಆರಂಭವಾಗುತ್ತಿದ್ದಂತೆ ನಾಟಕ ಪ್ರದರ್ಶನ ಧಾರ್ಮಿಕ ಆವರಣದಿಂದ ಹೊರಹಾಕಲ್ಪಟ್ಟಿತು. ಶ್ರೀಮಂತರ, ಸಣ್ಣ ಸಣ್ಣ ದೊರೆಗಳಂತಿದ್ದ ಪಾಳೆಯಗಾರರ ಆಶ್ರಯ ಪಡೆದು ನಾಟಕ ಮಂಡಲಿಗಳು ಹುಟ್ಟಿಕೊಂಡವು. ನಟರು, ನಿರ್ದೇಶಕರು ಕಲಾವಂತರಾದರೂ ವೈಯಕ್ತಿಕ ವಾಸ್ತವ ಜೀವನದಲ್ಲಿ ಬಡವರೂ ಅಶಿಕ್ಷಿತರೂ ಆಗಿರುತ್ತಿದ್ದರು.  ಇವರಿಗೆ ಸಮಾಜದಲ್ಲಿ ಗೌರವವಿರಲಿಲ್ಲ, ಯಾವುದೇ ಪ್ರತಿಷ್ಠಿತ ಸ್ಥಾನಮಾನಗಳಿರಲಿಲ್ಲ.

	ಹೀಗೆ ನಾಟಕದವರನ್ನು ಮನರಂಜನೆಗಾಗಿ ಪೋಷಿಸಿದರೂ ಮರ್ಯಾದೆಯ ಮೇರೆಯ ಹೊರಗೇ ಇಡಲಾಗಿತ್ತು. ಖಾಸಗಿಯಾಗಿ ಏರ್ಪಾಟಾದ ನಾಟಕಗಳು ಶ್ರೀಮಂತರ ಮಹಲುಗಳಲ್ಲೊ, ಪ್ರವಾಸಿಗೃಹ, ತಂಗುಛತ್ರಗಳಲ್ಲೊ ಪ್ರದರ್ಶಿತವಾಗುತ್ತಿದ್ದವು. ಆಗ ಸಾರ್ವಜನಿಕ ರಂಗಮಂದಿರಗಳಿರಲಿಲ್ಲ. ಅದುವರೆಗೆ ಲಂಡನ್ ನಗರದಲ್ಲಿ ರಂಗಮಂದಿರ ಗಳನ್ನು ಕಟ್ಟಿಸಲು ಅನುಮತಿಯನ್ನೇ ನೀಡಿರಲಿಲ್ಲ. ಊರಿಂದೂರಿಗೆ ಹೋಗಿ ನಾಟಕವಾಡುತ್ತಿದ್ದ ಪ್ರವಾಸಿ ಕಂಪನಿಗಳಿದ್ದವು. ಹೀಗಿರುವಲ್ಲಿ ಎಲಿಜಬೆತ್ ರಾಣಿ ಆಡಳಿತ ವಹಿಸಿಕೊಂಡ ಮೇಲೆ ಆಕೆಯ ನಾಟಕ ಪ್ರೀತಿ ನಟರಿಗೆ ನಾಟಕಕಾರರಿಗೆ ವರಪ್ರದವಾಯಿತು. ರಾಣಿಯ ಆಸ್ಥಾನ ದಿಂದಲೇ ನಾಟಕ ಮಂಡಲಿಗಳಿಗೆ ಆಹ್ವಾನ ಬರತೊಡಗಿತು. 1583ರಲ್ಲಿ ರಾಣಿಯ ಕೃಪಾಪೋಷಿತ ನಾಟಕ ಮಂಡಲಿ (ಕ್ವೀನ್ಸ್‍ಮೆನ್) ಸ್ಥಾಪಿತ ವಾಯಿತು. ರಾಣಿಯಂತೆ ಆಸ್ಥಾನದ ಗಣ್ಯರೂ ನಾಟಕದ ಅಭಿಮಾನಿಗಳಾದರು. ಅವರ ಕೃಪಾಪೋಷಿತ ಮಂಡಲಿಗಳೂ ತಲೆಯೆತ್ತಿದವು. 1587ರ ಸುಮಾರಿಗೆ ಲೆಸ್ಟರ್ಸ್‍ಮೆನ್, ಎಸೆಕ್ಸ್‍ಮೆನ್ ಎಂಬ ಕಂಪನಿಗಳಾಗಿದ್ದವು. ಹೀಗಿದ್ದರೂ ಪ್ರಸಿದ್ಧ ಆದಿ ನಾಟಕರಂಗಗಳಾದ ಥಿಯೇಟರ್, ಕರ್ಟನ್, ರೋಜ್, ಸ್ವಾನ್ ಮಂದಿರಗಳು ನಗರದ ಹೊರಗೇ ಇದ್ದವು. ಪುಂಡು ಪೋಕರಿಗಳ, ದೊಂಬಿಕೋರರ ನೆಲೆಗಳೆಂಬ ಅಪಖ್ಯಾತಿಗೂ ಅವು ಗುರಿಯಾಗಿದ್ದವು. ನಾಟಕ ರಚನೆ ಸ್ವರೂಪಗಳಲ್ಲಿ ಯಾವುದೇ ಶಾಸ್ತ್ರೀಯ ಕಟ್ಟುಪಾಡಿರಲಿಲ್ಲ. ಪ್ರಾಚೀನ ಗ್ರೀಕ್ ನಾಟಕ ಲಕ್ಷಣ ಶಾಸ್ತ್ರದಂತೆ ಕಾಲ, ಸ್ಥಳ, ಕ್ರಿಯೆಗಳ ಐಕ್ಯಗಳನ್ನೂ ಈ ನಾಟಕಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ.

	ನವೋದಯದ ಹೊಸಗಾಳಿ ಬೀಸಿದ ಬಳಿಕ ಗ್ರೀಕ್, ರೋಮ್‍ಗಳ ಕ್ಲಾಸಿಕಲ್ ಪರಂಪರೆಯ ಬಗ್ಗೆ ಆಸಕ್ತಿ ಹುಟ್ಟಿತು. ಪ್ರಾಚೀನ ಮಾದರಿಯನ್ನೇ ಅನುಸರಿಸಿ ಹರ್ಷ ನಾಟಕಗಳನ್ನೂ ರುದ್ರನಾಟಕಗಳನ್ನೂ ವಿಶ್ವವಿದ್ಯಾಲ ಯದ ಪದವೀಧರ ನಾಟಕಕಾರರು ಬರೆಯತೊಡಗಿದರು. ಹರ್ಷಕಗಳಿಗೆ ಲ್ಯಾಟಿನ್ನಿನ ಟೆರೆನ್ಸ್, ಮತ್ತು ಪ್ಲಾಟಸ್ ಸ್ಫೂರ್ತಿಯಿತ್ತರೆ, ರುದ್ರ ನಾಟಕಗಳಿಗೆ ಸೆನೆಕ ಮೇಲ್ಪಂಕ್ತಿಯಾದ.

	ಷೇಕ್‍ಸ್ಪಿಯರ್ ನಾಟಕಕ್ಷೇತ್ರವನ್ನು ಪ್ರವೇಶಿಸುವ ಕಾಲಕ್ಕೆ ವಿಶ್ವವಿದ್ಯಾ ಲಯದ ಬುದ್ಧಿವಂತರು (ಯೂನಿವರ್ಸಿಟಿ ವಿಟ್ಸ್) ಎಂದು ಹೆಸರಾದ ನಾಟಕಕಾರರ ಬಳಗ ಈ ಹೊಸಬಗೆಯ ನಾಟಕಗಳನ್ನು ಬರೆಯಲಾ ರಂಭಿಸಿ ಭೂಮಿಕೆಯನ್ನು ಸಿದ್ಧಪಡಿಸಿತ್ತು. ಜಾನ್‍ಲಿಲಿ, ಜಾರ್ಜ್‍ಪೀಲ್, ರಾಬರ್ಟ್ ಗ್ರೀನ್, ಕಿಡ್, ಕ್ರಿಸ್ಟೋಫರ್ ಮಾರ್ಲೊ, ಲಾಡ್ಜ್ ಮತ್ತು ನ್ಯಾಷ್ ಈ ಬಳಗದ ಹೆಸರಾಂತ ನಾಟಕಕಾರರು. ಅವರಲ್ಲಿ ಮಾರ್ಲೊ ಹೊರತು ಉಳಿದವರು ತಮ್ಮ ನಾಟಕಗಳಿಂದ ಸಾಕಷ್ಟು ಹಣವನ್ನಾಗಾಲೀ, ಯಶಸ್ಸನ್ನಾಗಲಿ ಗಳಿಸುವುದಕ್ಕಾಗಿರಲಿಲ್ಲ. ಮಾರ್ಲೊ ಉದಯೋನ್ಮುಖ ನಾಟಕಕಾರರಲ್ಲಿ ಮೇಲೇರುವ ಭರವಸೆ ಕೊಟ್ಟರೂ ಅವನ ಅಕಾಲ ಮರಣದಿಂದಾಗಿ ಷೇಕ್‍ಸ್ಪಿಯರ್ ಒಬ್ಬನೇ ಉಜ್ಜ್ವಲ ತಾರೆಯಾಗಿ ಉಳಿದ. ಹಿಂದಿನ ಸಮಕಾಲೀನ ನಾಟಕಕಾರರು ಕಥಾಸಂವಿಧಾನ ಪಾತ್ರಚಿತ್ರಣ, ಭಾಷೆ, ಛಂದಸ್ಸು ಹೀಗೆ ಒಂದೊಂದು ಅಂಶದಲ್ಲಿ ಮಾತ್ರ ಶ್ರೇಷ್ಠರೆನಿಸಿದರೆ ಈತ ಎಲ್ಲದರಲ್ಲೂ ಶ್ರೇಷ್ಠನೆನಿಸಿದ.

	ಎಲಿಜಬೆತ್ ರಾಣಿಯ ಪ್ರೋತ್ಸಾಹ, ಪೋಷಣೆಗಳಿಂದ ಕ್ವೀನ್ಸ್‍ಮೆನ್ ನಾಟಕ ಮಂಡಲಿ ಸ್ಥಾಪನೆಯಾದ ಅನಂತರ ಆಸ್ಥಾನದ ಇತರ ಪ್ರತಿಷ್ಠಿತರೂ ತಮ್ಮ ನಾಟಕಾಭಿಮಾನವನ್ನು ತೋರಿಸಿ ರಾಣಿಯ ಪ್ರೀತಿಪಾತ್ರರಾಗಬೇಕೆಂದು ಬೇರೆ ಬೇರೆ ನಾಟಕಮಂಡಲಿಗಳ ಪ್ರಧಾನ ಪೋಷಕರಾಗತೊಡಗಿದರು. ಪರಿಣಾಮವಾಗಿ ಹಿಂದೆ ಪ್ರಸ್ತಾಪಿಸಿದಂತೆ 1587ರ ಸುಮಾರಿಗೆ ಎಸೆಕ್ಸ್‍ಮೆನ್, ಲೆಸ್ಟರ್ಸ್‍ಮೆನ್, ಸ್ಟ್ರ್ಯಾಟ್‍ಫರ್ಡ್‍ಮೆನ್ ಎಂಬ ಮಂಡಲಿಗಳಾದವು. ಇವು ಪಟ್ಟಣಗಳಲ್ಲಿ ಮಾತ್ರವಲ್ಲ ಹಳ್ಳಿಗಳ ಕಡೆಗೂ ಪ್ರವಾಸ ಹೋಗಿ ಕ್ಯಾಂಪ್ ಮಾಡಿ ನಾಟಕಗಳನ್ನು ಆಡುತ್ತಿದ್ದವು. ಹೀಗೆ ಸ್ಟ್ರ್ಯಾಟ್‍ಫರ್ಡ್‍ಗೆ ಬಂದಿದ್ದ ಲೆಸ್ಟರ್ಸ್‍ಮೆನ್ ನಾಟಕ ಮಂಡಲಿಯನ್ನು ಈತ 1587ರಲ್ಲೇ ಸೇರಿರಬಹುದು. 1588ರಲ್ಲಿ ಲೆಸ್ಟರ್ ದಣಿ ತೀರಿಹೋಗಿ ಸ್ಟ್ರೇಂಜ್‍ನ ಪೋಷಕತ್ವದಲ್ಲಿ ಅವನ ಹೆಸರನ್ನು ಹೊತ್ತು ಮಂಡಲಿಯಾಯಿತು. ಅದೇ ಮಂಡಲಿ ಮುಂದೆ ಡರ್ಬೀಸ್‍ಮೆನ್ ಆಗಿ ಕಡೆಗೆ 1594ರಲ್ಲಿ ಚೇಂಬರ್ಲೇನ್ಸ್‍ಮೆನ್ ಎಂಬ ಮಂಡಲಿಯಾಯಿತು. ಅಷ್ಟರೊಳಗೆ ಈತ ವೆಂಬ್ರೋಕ್ಸ್‍ಮೆನ್, ಸಸೆಕ್ಸ್‍ಮೆನ್, ಕ್ವೀನ್ಸ್‍ಮೆನ್ ಮುಂತಾದ ಮಂಡಲಿಗಳಲ್ಲಿ ಅಷ್ಟಷ್ಟು ಕಾಲ ಇದ್ದು 1594ರಲ್ಲಿ ಛೇಂಬರ್ಲೇನ್ಸ್‍ಮೆನ್ ಮಂಡಲಿ ಸೇರಿದ್ದನೆಂಬುದಕ್ಕೆ ದಾಖಲೆಯಿದೆ. ಆ ವರ್ಷ ರಾಣಿಯ ಎದುರು ಆಡಿದ ನಾಟಕದಲ್ಲಿ ಪಾತ್ರಮಾಡಿ ಸಂಭಾವನೆ ಪಡೆದವರಲ್ಲಿ ಈತನ ಹೆಸರೂ ಇದೆ. 1592-94ರವರೆಗೆ ಲಂಡನ್ನಿನಲ್ಲಿ ಪ್ಲೇಗ್‍ನ ಕಾರಣವಾಗಿ ನಾಟಕ ಮಂದಿರಗಳನ್ನು ಮುಚ್ಚಲಾಗಿತ್ತು. ಎರಡು ವರ್ಷ ನಾಟಕಗಳಿಲ್ಲದೆ ನಟರು ಮತ್ತು ನಾಟಕಕಾರರು ನಿರುದ್ಯೋಗಿಗಳಾಗಿ ಪರಿತಪಿಸಬೇಕಾಯಿತು. ನಾಟಕಕಾರನಿಗಿಂತ ಕವಿಗೆ ಸಮಾಜದಲ್ಲಿ ಹೆಚ್ಚು ಗೌರವ ಮನ್ನಣೆಗಳಿದ್ದು ದನ್ನೂ ಶ್ರೀಮಂತರ ಮತ್ತು ಪ್ರತಿಷ್ಠಿತರ ವೃತ್ತಗಳಲ್ಲಿ ತಲೆಯೆತ್ತಿ ಓಡಾಡಬಹುದಾಗಿದ್ದುದನ್ನು ಈತ ಅರಿತಿದ್ದ.

	ಷೇಕ್‍ಸ್ಪಿಯರ್‍ನ ಕಾವ್ಯರಚನೆ: ವ್ಯವಹಾರ ಕುಶಲನಾಗಿದ್ದ ಈತ 1592ರ ಅವಧಿಯನ್ನು ಕಾವ್ಯರಚನೆಗೆ ತನ್ನ ಬುದ್ಧಿಕೌಶಲ ಉಪಯೋಗಿಸಿದ. ವೀನಸ್ ಅಂಡ್ ಅಡೋನಿಸ್ ಎಂಬ ಕಾವ್ಯವನ್ನು 1593ರಲ್ಲೂ ದ ರೇಪ್ ಆಫ್ ಲೂಕ್ರೀಸ್ ಎಂಬ ಕಾವ್ಯವನ್ನು 1594ರಲ್ಲೂ ರಚಿಸಿ ಪ್ರಕಟಿಸಿದ. ಅರ್ಲ್ ಆಫ್ ಸೌಥ್ಯಾಂಪ್ಟನ್ ಆಗಿದ್ದ ಹೆನ್ರಿ ರಿಯೊತ್ ಸ್ಲಿ ಎಂಬ ಶ್ರೀಮಂತ ಪೋಷಕನಿಗೆ ಕವಿ ಈ ಕಾವ್ಯಗಳನ್ನು ಅರ್ಪಣೆ ಮಾಡಿದ್ದಾನೆ. ಈತನಿಗೆ ಈ ಮಹನೀಯನ ಬಗ್ಗೆ ತುಂಬಾ ಪ್ರೀತಿ, ವಿಶ್ವಾಸ, ಗೌರವ, ಅಭಿಮಾನಗಳಿದ್ದುವು ಎಂಬುದು ಅರ್ಪಣೆಯ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಈ ಕಾವ್ಯಗಳೆರಡೂ ಸುಂದರವಾದ ಕಥನಗಳು. ವೀನಸ್ ಕಥೆ ಪೌರಾಣಿಕ. ಇನ್ನೊಂದು ಐತಿಹಾಸಿಕ ಕಥೆ. ಎರಡೂ ಶೀಲವನ್ನು ಎತ್ತಿ ಹಿಡಿದು ಕಾಮವನ್ನು ಖಂಡಿಸುವ ನೀತಿಯಿಂದ ಕೂಡಿವೆ. ಕಾವ್ಯದ ಸೊಗಸು, ಪದಗಳ ಲಾಲಿತ್ಯ, ಇಂಪು, ಹಳ್ಳಿಗಾಡಿನ ಚೆಲುವನ್ನು ಸೂಸುವ ಪ್ರತಿಮೆಗಳು ಎಲ್ಲವೂ ಕವಿಯ ಪ್ರತಿಭೆ, ಸ್ವಂತಿಕೆಗಳನ್ನು ಸಾರುತ್ತವೆ. ಹೊಚ್ಚ ಹೊಸ ಬಗೆಯಾಗಿ ಸಹಜವಾಗಿ ಅರಳಿದ ಹೂವುಗಳಂತೆ ಸೌರಭವನ್ನು ಬೀರುತ್ತ ಎರಡೂ ಕಾವ್ಯಗಳು ಸುಸಂಸ್ಕøತ ಓದುಗರ ಮನಸ್ಸನ್ನು ಬಹುಬೇಗ ಸೆಳೆದವು. ಇವನ ಭಾಗ್ಯೋದಯವಾಯಿತು. ಒಳ್ಳೆಯ ಹೆಸರು, ರಾಜಮನ್ನಣೆ, ಹಣದೊರೆತವು.

	ಸಾನೆಟ್ಟುಗಳು: ಈತ ರಚಿಸಿರುವ ಸಾನೆಟ್‍ಗಳು ಕವಿಯ ಹೃದಯಾಂತ ರಾಳವನ್ನೇ ತೆರೆದಿಟ್ಟ ಸುಂದರ ಭಾವಗೀತೆಗಳಾಗಿ ಆತ್ಮೀಯರ ವಲಯದಲ್ಲಿ ಪ್ರಚುರವಾದುವು. ಇದೇ ಧಾಟಿಯಲ್ಲಿ ಬರೆದ ಇನ್ನಷ್ಟು ಸಾನೆಟ್ಟುಗಳೂ ಸೇರಿ 1609ರಲ್ಲಿ ಒಂದು ಸಂಕಲನವಾಗಿ ಪುಸ್ತಕ ರೂಪದಲ್ಲಿ ಪ್ರಕಟವಾದವು. ಇದರಲ್ಲಿ ಒಟ್ಟು 154 ಸಾನೆಟ್ಟುಗಳಿವೆ. ಮೊದಲ 126 ಸಾನೆಟ್‍ಗಳು ಒಬ್ಬ ಚೆಲುವ ಹುಡುಗ-ಗೆಳೆಯನನ್ನು ಕುರಿತವಾಗಿವೆ.  ಉಳಿದ 28 ಸಾನೆಟ್‍ಗಳ ನಾಯಕಿ ಯಾರೋ ಒಬ್ಬಳು ಶಾಮಲವರ್ಣದ ಚೆಲುವೆ.

	ಈ ಭಾವಗೀತೆಗಳಲ್ಲಿ ಮಾತ್ರ ಈತನ ವೈಯಕ್ತಿಕ ಭಾವನೆ, ವಿಚಾರ, ಅಭಿರುಚಿ, ನೋವು ನಲಿವುಗಳು ಆತ್ಮ ವೃತ್ತಾಂತದಂತೆ ವ್ಯಕ್ತವಾಗಿವೆ. ಮೊದಲ ಗುಂಪಿನ ಸಾನೆಟ್‍ಗಳಲ್ಲಿ ಕವಿಗೂ ಚೆಲುವ ಗೆಳೆಯನಿಗೂ ಇದ್ದ ಅನ್ಯಾದೃಶವಾದ ಮಧುರ ಸ್ನೇಹ ತುಂಬಿ ತುಳುಕಾಡುತ್ತದೆ. ಎರಡನೆಯ ಗುಂಪಿನ ಸಾನೆಟ್‍ಗಳಲ್ಲಿ ಕಪ್ಪುಬಣ್ಣದವಳಾದರೂ ಮನಮೋಹಕಳಾಗಿದ್ದ ಯಾವುದೋ ಹೆಣ್ಣಿನಲ್ಲಿ ಉಂಟಾದ ಅನುರಾಗ, ಆಕೆಯ ವಿಶ್ವಾಸ ಘಾತಕವಾದ ವರ್ತನೆ, ಭಗ್ನಪ್ರೇಮಿಯಾಗಿ ಕವಿ ಉಂಡ ಕಹಿ ಅನುಭವ, ಆಕೆಯನ್ನು ಕಳೆದುಕೊಂಡ ದುಃಖ ಮರೆಯುವ ಮುನ್ನ ಕೇಡಿಗ ಕವಿಯೊಬ್ಬ ಹುಳಿ ಹಿಂಡಿ ಚೆಲುವ ಗೆಳೆಯನ ಸ್ನೇಹ ಸುಧೆಯನ್ನೂ ಕೆಡಿಸಿ ಪ್ರಿಯಮಿತ್ರನೂ ಆಶ್ರಯದಾತನೂ ಆಗಿದ್ದವನನ್ನು ಕಳೆದುಕೊಂಡು ಘೋರವಾದ ನಿರಾಸೆ, ಶೂನ್ಯತೆಗಳಲ್ಲಿ ಮುಳುಗಿದ ಸಂಗತಿಗಳು ಬರುತ್ತವೆ. ಈ ಸಾನೆಟ್ಟುಗಳಲ್ಲಿ ಬದುಕಿನ ಆಸೆ, ಆಕಾಂಕ್ಷೆ, ನೋವು ನಿರಾಸೆ, ಸುಖದುಃಖ, ಚಿಂತೆ, ಕೊರಗು, ಸ್ನೇಹ, ವಿಶ್ವಾಸದ್ರೋಹ, ಏರು ಇಳಿವು ಈ ಎಲ್ಲ ಭಾವಗಳೂ ಅತ್ಯಂತ ಸೂಕ್ಷ್ಮವಾಗಿ ಸಂಕ್ಷಿಪ್ತವಾಗಿ ಮತ್ತು ತೀವ್ರವಾಗಿ ಅಭಿವ್ಯಕ್ತವಾಗಿರುವುದು ಕಾವ್ಯಲೋಕದ ಒಂದು ಸೋಜಿಗ.

	ಈ ಸಾನೆಟ್‍ಗಳ ವಸ್ತು, ಅನುಭವಗಳು ಬಹುನಿಗೂಢವಾಗಿದ್ದು ಅನೇಕ ಬಗೆಯ ಊಹಾಪೋಹ, ಅಭಿಪ್ರಾಯ, ವ್ಯಾಖ್ಯಾನಗಳು ಹುಟ್ಟಿಕೊಂಡು ವಿವಾದಗ್ರಸ್ತವಾಗಿವೆ. ಇವುಗಳ ಅಧ್ಯಯನವೇ ವಿಪುಲವಾಗಿ ಬೆಳೆದಿದೆ. ವಿದ್ವಾಂಸರ ತಲೆಯನ್ನು ಕೆಡಿಸಿರುವ ಚರ್ಚೆ, ವಾದ, ವಿವಾದಗಳು ಇತ್ಯರ್ಥವಾಗುವ ಸಂಭವವೇ ಇಲ್ಲ. ಆದರೂ ಈ ಭಾವಗೀತೆಗಳ ಶ್ರೇಷ್ಠತೆ, ಸೊಗಸು, ಕವಿಯ ವ್ಯಕ್ತಿತ್ವದ ಮೇಲೆ ಬೀರುವ ಬೆಳಕು ಇತ್ಯಾದಿಗಳ ಬಗ್ಗೆ ಮಾತ್ರ ಎಲ್ಲರದೂ ಮೆಚ್ಚುಗೆಯೇ ವಿನಾ ಅಭಿಪ್ರಾಯಭೇದವಿಲ್ಲ. ಆತ್ಮೀಯ ಕಾವ್ಯಭಿವ್ಯಕ್ತಿಯಿಂದಾಗಿ ಈ ಸಾನೆಟ್‍ಗಳು ಭಾವಗೀತ ಪ್ರಕಾರದಲ್ಲಿ ತಮ್ಮದೇ ವಿಶಿಷ್ಟಸ್ಥಾನವನ್ನು ಪಡೆದಿವೆ. ಹದಿನಾಲ್ಕು ಸಾಲುಗಳ ಈ ಬಂಧ ಇವನದೇ ವಿಶಿಷ್ಟ ರೀತಿಯದಾಗಿದ್ದು ಷೇಕ್‍ಸ್ಪಿಯರ್ ಸಾನೆಟ್ ಎಂದು ಪ್ರಸಿದ್ಧವಾಗಿದೆ. ಇಷ್ಟು ಸೊಗಸಾಗಿ, ಅಚ್ಚುಕಟ್ಟಾಗಿ ನಾಲ್ಕು ಚೌಪದಿಗಳ ಮೇಲೊಂದು ದ್ವಿಪದಿಯನ್ನು ರಚಿಸಿದ ಕವಿ ವಿರಳ. ಭಾಷೆ, ಭಾವಾಭಿವ್ಯಕ್ತಿ ಎರಡರ ಮೇಲೂ ಇವನದು ವಿಶೇಷ ಪ್ರಭುತ್ವ.

	ಈ ಸಾನೆಟ್‍ಗಳನ್ನು ಮೊದಲ ಬಾರಿ ಪ್ರಕಟಿಸಿದ ಥಾರ್ಪ್, ಇದನ್ನು ಮಿಸ್ಟರ್ ಡಬ್ಲ್ಯೂ.ಎಚ್.ಗೆ ಅರ್ಪಣೆ ಮಾಡಿರುವಂತೆ ಕಾಣಿಸಿದ್ದಾನೆ. ಅರ್ಪಣೆ ಮಾಡಿರುವುದು ಪ್ರಕಾಶಕನೋ ಕವಿಯೋ ಎಂಬುದು ಸ್ಪಷ್ಟವಾಗಿಲ್ಲ. ಈ ಡಬ್ಲ್ಯೂ.ಎಚ್ ಯಾರು ಎಂಬುದು ಸಹ ಇನ್ನೂ ಇತ್ಯರ್ಥವಾಗದೆ ವಿವಾದಗ್ರಸ್ತವಾಗಿದೆ. ಎಚ್(ಹೆನ್ರಿ), ಡಬ್ಲ್ಯೂ (ರಿಯೋಥ್‍ಸ್ಲಿ) ಹಿಂದೆ ಮುಂದೆಯಾಗಿ ಡಬ್ಲ್ಯೂ.ಎಚ್ ಆಗಿರಬಹುದೇ? ಹಾಗಿದ್ದರೆ ಆ ಹೆಸರಿನ ಅರ್ಲ್ ಆಫ್ ಸೌಥ್ಯಾಂಪ್ಟನ್‍ಗೆ ಅರ್ಪಿತವಾಗಿದೆ ಎಂಬ ಊಹೆ ಸರಿಯಾಗುತ್ತದೆ. ಹಾಗಿಲ್ಲದೆ ಹೋದರೆ ಡಬ್ಲ್ಯೂ (ವಿಲಿಯಮ್) ಎಚ್(ಹರ್ಬರ್ಟ್) ಎಂದು ಬಿಡಿಸಿ ವಿಲಿಯಂ ಹರ್ಬಟ್ ಹೆಸರಿನ ಅರ್ಲ್ ಆಫ್ ಪೆಂಬ್ರೊಕ್ ಇರಬಹುದು ಎಂಬ ಊಹೆ ಸರಿ ಎನ್ನಬೇಕಾಗುತ್ತದೆ. ಸಾನೆಟ್ಟುಗಳ ರಚನೆಯ ಕಾಲವೂ ನಿರ್ದಿಷ್ಟವಾಗಿ ತಿಳಿಯದು. 1590-97ರ ಅವಧಿಯಲ್ಲಿ ಎಂದು ಮಾತ್ರ ಹೇಳಬಹುದು. 1598ರಲ್ಲಿ ಫ್ರಾನ್ಸಿನ ಮಿಯರ್ಸ್‍ನ ಪಲ್ಲಾಡಿಸ್ ಟೇಮಿಯದಲ್ಲಿ ಈ ಸಾನೆಟ್ಟುಗಳನ್ನು ಕುರಿತು ಮಾತುಗಳು ಬರುತ್ತವೆ.
	
1592ರ ಹೊತ್ತಿಗಾಗಲೇ ಆರೇಳು ನಾಟಕಗಳನ್ನು ಬರೆದು ಯಶಸ್ಸು, ಜನಪ್ರಿಯತೆಗಳನ್ನು ಗಳಿಸಿದ್ದ ಈತ 1594ರ ಹೊತ್ತಿಗೆ ವಿಶ್ವವಿದ್ಯಾನಿಲಯದ ಜಾಣರ ನಾಟಕ ಮಾದರಿಗಳನ್ನು ಅನುಕರಣೆ ಮಾಡುತ್ತಾನೆಂಬ ಟೀಕೆಯ ಹಂತವನ್ನು ದಾಟಿ, ಸ್ವಯಂ ಪ್ರತಿಭೆಯನ್ನು ಸಾಕಷ್ಟು ಪ್ರಕಟಗೊಳಿಸಿದ ಪ್ರಸಿದ್ಧ ನಾಟಕಕಾರನಾಗಿದ್ದ. ಅದು ಇವನ ಪ್ರಸಿದ್ಧಿಯ ಕಾಲದ ಆರಂಭವಾ ಗಿತ್ತು. ಅನಂತರದ 15 ವರ್ಷಗಳು ನಾಟಕರಚನೆಯ ಸಮೃದ್ಧಕಾಲ. ಕಲಾಶ್ರೇಷ್ಠತೆಯ ಮೆಟ್ಟಿಲುಗಳನ್ನೇರುತ್ತ ನಡೆದ ಇವನ ಉತ್ಕರ್ಷದಕಾಲ. ಈ ಅವಧಿಯಲ್ಲಿ ಇವನು ಸು. 30 ನಾಟಕಗಳನ್ನು ಬರೆದ. ಈತ ಲಾರ್ಡ್ ಬೇಂಬ್ರೋಕ್ಸ್ ಕಂಪನಿಯಲ್ಲಿದ್ದ ತನ್ನ ಮೊದಲ ಕೆಲವು ನಾಟಕಗಳನ್ನು ಅವರಿಗಾಗಿ ರಚಿಸಿರುವುದಕ್ಕೆ ದೊರೆತಿರುವ ಕೆಲವು ಸೂಚನೆಗಳನ್ನು ಆಧಾರ ದಾಖಲೆಗಳಲ್ಲಿ ಗುರುತಿಸಬಹುದು. ಈ ಪ್ರಥಮ ಅವಧಿಯ (1584-94) ಕೊನೆಯ ಹೊತ್ತಿಗೆ ಅಂದರೆ 1592ರಷ್ಟು ಮುಂಚೆಯೇ ಸಮಕಾಲೀನ ನಾಟಕಕಾರರನ್ನೆಲ್ಲ ಮೀರಿಸಿ, ಯೂನಿವರ್ಸಿಟಿ ವಿಟ್ಸ್ ಗುಂಪಿನ ಗಣ್ಯನಾಟಕ ಕಾರ ಗ್ರೀನ್ ಸಹ ಅಸೂಯೆ ಪಡುವಷ್ಟರಮಟ್ಟಿಗೆ ಇವನು ನಾಟಕಕಾರ ನಾಗಿ ಯಶಸ್ಸು ಮತ್ತು ಜನಪ್ರಿಯತೆಗಳನ್ನು ಪಡೆದಿದ್ದುದು ಸುಸ್ಪಷ್ಟ.

	1594ರ ವೇಳೆಗೆ ಚೇಂಬರ್ಲೇನ್ಸ್ ಮೆನ್ ನಾಟಕ ಮಂಡಲಿಯನ್ನು ಸೇರಿದ್ದ ಈತ ಅದರ ಖಾಯಂ ನಾಟಕಕಾರನಾಗಿ ಮಂಡಲಿಯ ನಾಟಕ ಪ್ರದರ್ಶನಗಳ ಯಶಸ್ಸು ಹಾಗೂ ಜನಪ್ರಿಯತೆಗೆ ಮುಖ್ಯ ಕಾರಣಕರ್ತ ನಾದ. ರಿಚರ್ಡ್ ಬರ್ಬೇಜ್(ರುದ್ರ ನಾಟಕಗಳ ನಾಯಕ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದು ಬಹು ಪ್ರಸಿದ್ಧನಾಗಿದ್ದ ನಟ), ಹಾಸ್ಯನಟ ವಿಲ್‍ಕೆಂಫ್, ಈ ಕೆಂಫಯ ಮೇನೇಜರುಗಳಾಗಿದ್ದ ಜಾನ್ ಹೆಮಿಂಗ್ ಮತ್ತು ಹೆನ್ರಿ ಕಾಂಡೆಲ್, ಜೊತೆಗೆ ಈತ, ಇಷ್ಟು ಜನ ಚೇಂಬರ್ಲೇನ್ಸ್ ಮೆನ್ ಕಂಪನಿಯ ಪಾಲುದಾರರಾಗಿದ್ದರು. ರಿಚರ್ಡ್‍ಬರ್ಬೇಜ್‍ನ ತಂದೆ ಜೇಮ್ಸ್ ಬರ್ಬೇಜ್ ಇಂಗ್ಲೆಂಡಿನ ಮೊಟ್ಟ ಮೊದಲ ನಾಟಕಮಂದಿರವಾದ ದ ಥಿಯೇಟರ್‍ನ ಅರ್ಧ ಪಾಲುದಾರ ನಾಗಿದ್ದ. ಈತನ ನಾಟಕಗಳು ಮೊದಲು ಪ್ರದರ್ಶಿತವಾಗಿ ಪ್ರಕಾಶಗೊಂಡದ್ದು ಈ ರಂಗಭೂಮಿಯಮೇಲೆ. 1599ರಲ್ಲಿ ಈ ನಾಟಕ ಶಾಲೆಯ ಪಾಲುದಾರರಲ್ಲಿ ಜಗಳವಾಗಿ ರಂಗಮಂದಿರವನ್ನು ಕೆಡವಿ ಹೊಸ ಒಡೆತನದಲ್ಲಿ ಗ್ಲೋಬ್ ರಂಗಮಂದಿರ ಅದೇ ನಿವೇಶನದಲ್ಲಿ ನಿರ್ಮಾಣವಾಯಿತು. 1599ರ ಮೇ ತಿಂಗಳಲ್ಲಿ ಇದರ ಪ್ರಾರಂಭೋತ್ಸವ ನಡೆಯಿತು. ಆದರೆ ಕೆಲವೇ ತಿಂಗಳಲ್ಲಿ ಸುತ್ತುಮುತ್ತ ವಾಸವಾಗಿದ್ದ ಪ್ರಭಾವಶಾಲಿ ವ್ಯಕ್ತಿಗಳ ವಿರೋಧದಿಂದ ರಂಗಮಂದಿರವನ್ನು ಲಂಡನ್ ಸೇತುವೆಗೆ ಸಮೀಪದ ಥೇಮ್ಸ್‍ನದಿ ದಂಡೆಯ ಮೇಲಿನ ಒಂದು ಸ್ಥಳಕ್ಕೆ ಬದಲಾಯಿಸಬೇಕಾಯಿತು. ಗ್ಲೋಬ್‍ನ ಪಾಲುದಾರರಲ್ಲಿ ಈತ ಸಹ ಒಬ್ಬನಾಗಿದ್ದು ಲಾಭದಲ್ಲಿ ಹತ್ತನೆಯ ಒಂದಂಶದಷ್ಟು ಪಾಲಿಗೆ ಹಕ್ಕುದಾರನಾಗಿದ್ದ. ಇವನು ರುದ್ರನಾಟಕ, ಹರ್ಷಕಗಳೆಡರಲ್ಲೂ ಶ್ರೇಷ್ಠ ರಚನಕಾರನಾಗಿದ್ದು ಲ್ಯಾಟಿನ್ನಿನ ಪ್ಲಾಟಸ್, ಸೆನೆಕರ ಸಾಲಿನಲ್ಲಿ ನಿಲ್ಲಬಲ್ಲ ಇಂಗ್ಲಿಷ್ ನಾಟಕಕಾರ, ಅವನ ಕೀರ್ತಿ ಅಮರವಾಗುವುದರಲ್ಲಿ ಸಂದೇಹವಿಲ್ಲ ಎಂದು 1598ರಲ್ಲೇ ಫ್ರಾನ್ಸಿನ ಮಿಯರ್ ಎಂಬಾತ ತನ್ನ ಪಲ್ಲಾಡಿಸ್ ಟೇಮಿಯ ಎಂಬ ಗ್ರಂಥದಲ್ಲಿ ಮುಕ್ತ ಹೃದಯದಿಂದ ಪ್ರಶಂಸಿಸಿದ್ದ. ಈತನ ಉತ್ಕøಷ್ಟ ಹರ್ಷಕಗಳಾಗಲಿ (ಎ ಮಿಡ್‍ಸಮ್ಮರ್ ನೈಟ್ಸ್ ಡ್ರೀಮ್ ಎಂಬ ನಾಟಕದ ಹೊರತು) ಮಹಾರುದ್ರ ನಾಟಕಗಳಾಗಲಿ ಆಗ ಇನ್ನೂ ರಚಿತವಾಗಿರಲಿಲ್ಲ. ಮೊದಲಲ್ಲಿ ಬರೆದ ನಾಟಕಗಳಿಂದಲೇ ಈತ ಅಷ್ಟು ಶ್ಲಾಘನೆಯನ್ನು ಸಮಕಾಲೀನ ವಿಮರ್ಶಕರಿಂದ ಪಡೆದಿದ್ದ. ಗ್ಲೋಬ್ ನಾಟಕಮಂದಿರದ ಆರಂಭೋತ್ಸವ ದಲ್ಲಿ ಮೊದಲು ಪ್ರದರ್ಶಿತವಾದದ್ದು ಇವನ ಜೂಲಿಯಸ್ ಸೀಸರ್ ಎಂಬ ಗಂಭೀರ ಐತಿಹಾಸಿಕ ನಾಟಕ. ಅಲ್ಲಿಂದ ಮುಂದಿನ ಒಂದು ದಶಕ ಈತನ ಬದುಕು ಸುವರ್ಣಕಾಲ.

	ಈ ಅವಧಿಯಲ್ಲಿ ಇವನ ಜೀವನ ಸುಖಮಯವಾಗಿತ್ತು. ನಾಟಕ ಗಳಿಂದ ಯಶಸ್ಸು ಸಾಮಾಜಿಕ ಮನ್ನಣೆ, ಶ್ರೀಮಂತರ, ಆಸ್ಥಾನಿಕರ ಜೊತೆಗೆ ಒಡನಾಟ, ಎಲಿಜಬೆತ್ ರಾಣಿಯ ಕೃಪಾದೃಷ್ಟಿ, ನಾಟಕ ಕಂಪೆನಿಯ ಪಾಲುದಾರನಾಗಿ ನಾಟಕ ಪ್ರದರ್ಶನಗಳಿಂದ ಗಳಿಸಿದ ಲಾಭದಲ್ಲಿ ಪಾಲು, ನಾಟಕ ರಚನೆಯಿಂದೆ ಸಂಭಾವನೆ- ಎಲ್ಲ ಇದ್ದು ಬಾಳು ಸುಗಮವಾಗಿ ಸಾಗಿತ್ತು. ಸ್ಟ್ರ್ಯಾಟ್‍ಫರ್ಡಿನ ಪುರಸಭೆಗೆ ಎರಡು ಬಾರಿ ಬೇಯ್ಲಿಫ್ ಆಗಿದ್ದ ರಿಚರ್ಡ್ ಕ್ವಿನ್ ಎಂಬ ಮಹಾಶಯ ಈತನಿಗೆ ಬರೆದ ಒಂದು ಕಾಗದ ಇದೇ ಸಂಗತಿಯನ್ನು ಪುಷ್ಟೀಕರಿಸುತ್ತದೆ. 1596ರಲ್ಲಿ ಇವನ ತಂದೆ ಜಾನ್‍ಗೆ ಸ್ಟ್ರ್ಯಾಟ್‍ಫರ್ಡಿನ ಬೇಯ್ಲಿಫ್ ಆಗಿ ಸಲ್ಲಿಸಿದ ಸೇವೆಗಾಗಿ ಕಾಲೇಜ್ ಆಫ್ ಹೆರಾಲ್ಡ್‍ದಿಂದ ಗೌರವ ಕವಚ-ಕೋಟ್ ಆಫ್ ಆಮ್ರ್ಸ್-ಬಂದಿತು. ಇದಕ್ಕಾಗಿ 30 ವರ್ಷ ಜಾನ್ ಪ್ರಯತ್ನಿಸಿದರೂ ನ್ಯಾಯವಾಗಿ ಬರಬೇಕಾಗಿದ್ದ ಈ ಗೌರವ ಪ್ರಶಸ್ತಿ ಬಂದದ್ದು 1596ರಲ್ಲಿ. ನಗರದಲ್ಲಿ ಉನ್ನತ ವಲಯದಲ್ಲಿ ವರ್ಚಸ್ಸಿದ್ದ ಮಗ ಇದಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ಸುಗಮಗೊಳಿಸಿ ದಂತೆ ತೋರುತ್ತದೆ. ಬಂದ ಪ್ರಶಸ್ತಿ ಎಂದರೆ ಒಂದು ಬೆಳ್ಳಿ ಮಿಶ್ರಿತ ಲೋಹಫಲಕ. ಅದರ ಮೇಲೆ ಖಡ್ಗ, ಭರ್ಜಿ, ರೆಕ್ಕೆ ಬಿಚ್ಚಿದ ಗಿಡುಗ-ಇವುಗಳನ್ನು ಹೊಂದಿರುವ ಚಿತ್ರಗಳ ಪ್ರಶಸ್ತಿ ಲೇಖವನ್ನೂ ಕೆತ್ತಲಾಗಿತ್ತು.

	1597ರಲ್ಲಿ ಈತ ತನ್ನ ಊರಿನಲ್ಲಿ ನ್ಯೂಪ್ಲೇಸ್ ಎಂಬ ತೋಟದ ಮನೆಯನ್ನು ಕೊಂಡುಕೊಂಡ. ಬಂದ ಹಣವನ್ನು ದುಂದುಮಾಡದೆ ಉಳಿಸಿ ಹುಟ್ಟೂರಿನಲ್ಲಿ ಮನೆ, ಜಮೀನು ಕೊಂಡುಕೊಂಡು ಆಸ್ತಿ ಮಾಡಿದ್ದು ಆತ ಲಂಪಟನಾಗಿ ಇತರ ನಾಟಕಕಾರರ ಜಾಡುಹಿಡಿಯದೆ ಗೌರವಯುತ ಜೀವನವನ್ನು ನಡೆಸಿದುದಕ್ಕೆ ಸಾಕ್ಷಿ. ವ್ಯಾವಹಾರಿಕ ಕಾರಣಗಳಿಗೆ ಗಮನಕೊಟ್ಟರೂ ಕಲಾವಿದನಾದ ಈತನ ಮನಸ್ಸು ಪೂರ್ಣವಾಗಿ ಹೊಸ ಹೊಸ ನಾಟಕಗಳ ರಚನೆಯಲ್ಲೇ ಮುಳುಗಿತ್ತು.

	1601ರಲ್ಲಿ ತಂದೆ ನಿಧನನಾದ. ಅರ್ಲ್ ಆಫ್ ಎಸೆಕ್ಸ್ ರಾಣಿಗೆ ವಿರುದ್ಧವಾಗಿ ದಂಗೆಯೆದ್ದನೆಂದು ರಾಜದ್ರೋಹದ ಮೇಲೆ ಗಲ್ಲಿಗೇರಿದ. ಅರ್ಲ್ ಆಫ್ ಸೌಥ್ಯಾಂಪ್ಟನ್‍ಗೂ ಅದೇ ಗತಿಯಾಗಬೇಕಾದುದು ತಪ್ಪಿ ಆಜೀವ ಸೆರೆವಾಸದ ಶಿಕ್ಷೆಗೆ ಗುರಿಯಾದ. ಇವರಿಬ್ಬರೂ ಈತ ಬೇಕಾದವನು. ಬದುಕಿನ ಈ ಸಾವು, ನೋವು, ನಿರಾಸೆಗಳನ್ನು ಅನುಭವಿಸಿದ ನಾಟಕಕಾರನ ಮನಸ್ಸು ಪಕ್ವವಾಗತೊಡಗಿತು. ರುದ್ರ ನಾಟಕಗಳು ಗಂಭೀರ, ಗಹನ ದರ್ಶನದಿಂದ ಗಟ್ಟಿಯಾದವು.

	1603ರಲ್ಲಿ ಎಲಿಜಬೆತ್ ರಾಣಿ ಮರಣಹೊಂದಿ ಒಂದನೆಯ ಜೇಮ್ಸ್ ದೊರೆಯಾದ. ಆತನೂ ನಾಟಕಾಭಿಮಾನಿಯಾಗಿದ್ದ. ಚೇಂಬರ್ಲೇನ್ಸ್ ಮೆನ್ ಕಂಪನಿಗೆ ಧಾರಾಳವಾಗಿ ಕೃಪಾಪೋಷಣೆಯಿತ್ತು ಪ್ರೋತ್ಸಾಹಿಸಿದ. ನಾಟಕದ ಹಿರಿಯ ಸದಸ್ಯರು, ಪಾಲುದಾರರು, ರಾಜನ ಆಸ್ಥಾನದಲ್ಲಿ ಗಣ್ಯಸ್ಥಾನವನ್ನು ಪಡೆದರು. ಕಿಂಗ್ಸ್‍ಮೆನ್ ಎಂದು ಮಂಡಲಿ ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ಈ ಮಂಡಲಿಯವರು ದೇಶದ ಯಾವ ಭಾಗದಲ್ಲಿ ಬೇಕಾದರೂ ನಾಟಕ ಪ್ರದರ್ಶನ ಮಾಡಬಹುದೆಂದು ವಿಶೇಷ ಅನುಮತಿಯ ರಾಜಾದೇಶ ದೊರೆಯಿತು. ದೊರೆಯ ಪಟ್ಟಾಭಿಷೇಕದ ಸಂದರ್ಭದಲ್ಲಿ ಆಡಿದ ಈತನ ನಾಟಕಗಳಲ್ಲಿ ಈತನೇ ಒಂದು ಪಾತ್ರವಹಿಸಿದ.    
  
	ಈ ಕಾಲದಲ್ಲಿ ಷೇಕ್‍ಸ್ಪಿಯರ್ ಲಂಡನ್‍ನ ಸಿಲ್ವರ್‍ಸ್ಟ್ರೀಟ್‍ನಲ್ಲಿ ಹ್ಯೂಗೊನಾಚ್ ಕುಟುಂಬದ ಮನೆಯಲ್ಲಿ ವಾಸವಾಗಿದ್ದನೆಂದು ವ್ಯಾಲೇಸ್ ಎಂಬ ವಿದ್ವಾಂಸ ಆಧಾರದ ಮೂಲಕ ತೋರಿಸಿದ್ದಾನೆ. ಷೇಕ್‍ಸ್ಪಿಯರ್‍ನ ಸಂಸಾರ ಸ್ಟ್ರ್ಯಾಟ್‍ಫರ್ಡಿನಲ್ಲೇ ಇತ್ತು. ಈತ ಆಗಾಗ ಅಲ್ಲಿಗೆ ಹೋಗಿ ಬಂದು ಸಂಸಾರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ. ಬೇಕಾದ ಸೌಕರ್ಯಗಳ ವ್ಯವಸ್ಥೆಯನ್ನು ಮಾಡುತ್ತಿದ್ದ. 1607ರಲ್ಲಿ ಹೆಸರಾದ ವೈದ್ಯ ಜಾನ್ ಹಿಲ್ ಎಂಬಾತನೊಂದಿಗೆ ಮಗಳು ಸುಸನ್ನಳ ಮದುವೆ ಮಾಡಿದ.

	ನಗರದಲ್ಲಿ ಒಂದು ಖಾಸಗಿ ಮನೆಯಂತಿದ್ದ ಬ್ಲಾಕ್‍ಫ್ರೈಯರ್ಸ್ ಥಿಯೇಟರಲ್ಲಿ ಚರ್ಚಿನ ಹುಡುಗರ ನಾಟಕ ಮಂಡಲಿ ನಾಟಕವಾಡಿಸು ತ್ತಿತ್ತು. 1608ರಲ್ಲಿ ಆ ಮಂಡಳಿ ಮುಚ್ಚಬೇಕಾಗಿ ಬಂದು ಬರ್ಬೇಜ್ ಕುಟುಂಬದವರು ಆ ನಾಟಕಶಾಲೆಯ ಒಡೆತನ ಪಡೆದರು. ಈತನೂ ಅದರ ಒಬ್ಬ ಪಾಲುದಾರ. ಕಿಂಗ್ಸ್‍ಮೆನ್ ಕಂಪನಿಯ ನಾಟಕಗಳು ಊರಹೊರಗಿನ ಗ್ಲೋಬ್‍ಥಿಯೇಟರಿನಲ್ಲಿ ನಡೆಯುತ್ತಿದ್ದುದು ತಪ್ಪಿ ಮೇಲ್ಛಾವಣಿಯಿಂದ ಸಂಪೂರ್ಣವಾಗಿ ಮುಚ್ಚಿದ್ದು ಚಳಿಗಾಲಕ್ಕೆ ಅನುಕೂಲವಾಗಿ ಕಂಡುಬಂದ ಬ್ಲಾಕ್‍ಫ್ರೈಯರ್ಸ್ ಥಿಯೇಟರಿನಲ್ಲಿ ನಡೆಯಲಾರಂಭಿಸಿದವು. ಈ ಮೊದಲು ಎಲ್ಲ ಕಡೆ ಬಳಕೆಯಾಗಿದ್ದ ನಾಟಕ ಶಾಲೆ ವೃತ್ತಾಕಾರದಲ್ಲಿರುತ್ತಿತ್ತು. ನಟ್ಟನಡುವಿನ ವಿಶಾಲವಾದ ಅಂಗಣದ ಮೇಲೆ ಛಾವಣಿ ಇರುತ್ತಿರಲಿಲ್ಲ. ಈ ಹೊಸ ನಾಟಕ ಮಂದಿರ ಖಾಸಗಿ ಮನೆಯನ್ನೇ ಪರಿವರ್ತಿಸಿದುದರಿಂದ ಚೌಕವಾಗಿತ್ತು. ಮೇಲ್ಗಡೆ ಛಾವಣಿ ಇದ್ದು ಪೂರ್ಣ ಮುಚ್ಚಿದ ರಂಗಮಂದಿರವಾಯಿತು. ಈ ಹೊಸ ಆಕಾರ, ರಚನೆಗಳಿಗನುಗುಣವಾಗಿ ನಾಟಕಗಳ ರೂಪ, ನಟನೆಯ ಶೈಲಿ ಸಹ ಬದಲಾದವು. ಮೊದಲಿನ ಕಾಲದ ರಂಗಭೂಮಿ ಗಿಂತ ಅನೇಕ ರೀತಿ ಹೆಚ್ಚು ಅನುಕೂಲವಾಗಿದ್ದ ಈ ಹೊಸ ನಾಟಕ ಶಾಲೆಗಳೇ ಹೆಚ್ಚು ಜನಪ್ರಿಯವಾಗಿ ಮುಂದೆ ಎಲ್ಲ ಕಡೆ ಇದೇ ಮಾದರಿಯ ರಂಗಮಂದಿರಗಳು ರಚಿತವಾದವು.

	ಈತ ಒಳ್ಳೆಯ ಪ್ರತಿಭಾವಂತ ಕವಿ, ನಾಟಕಕಾರನಾಗಿದ್ದುದಷ್ಟೇ ಅಲ್ಲ, ಲೌಕಿಕ ವ್ಯವಹಾರಗಳಲ್ಲೂ ಕುಶಲನಾಗಿದ್ದ. ಇವನ ಆರ್ಥಿಕ ಸ್ಥಿತಿ ಉತ್ತಮಗೊಂಡಹಾಗೆ ಮನೆಯವರ ಸ್ಥಿತಿಗತಿಗಳನ್ನೂ ಉತ್ತಮಗೊಳಿಸಿದ. ಆಸ್ತಿಪಾಸ್ತಿ ಮಾಡಿದ. ತನ್ನ ಹುಟ್ಟೂರಿನ ಬಗ್ಗೆ ಬಹಳ ಅಭಿಮಾನ, ನಿಷ್ಠೆ ಇರಿಸಿಕೊಂಡಿದ್ದ. ಕೀರ್ತಿ, ಹಣ, ಸಾಮಾಜಿಕ ಮಾನ್ಯತೆ, ನಗರ ಜೀವನದ ರಾಜಾಶ್ರಯದ ಸುಖಭೋಗ ಇವಾವುದರ ಅಮಲನ್ನೂ ಹತ್ತಿಸಿಕೊಳ್ಳದೆ ವಿವೇಕಿಯಾದ ಸದ್ಗøಹಸ್ಥನಂತೆ ಬಾಳಿದ. ತಾನು ಮೊದಲು ಸೇರಿದ ಚೇಂಬರ್ಲೇನ್ಸ್ ನಾಟಕ ಕಂಪನಿಯಲ್ಲೇ ನಿಷ್ಠೆಯಿಂದ ಉಳಿದು ಅದನ್ನೂ ಅಭಿವೃದ್ಧಿಗೊಳಿಸಿ ತಾನೂ ವೃದ್ಧಿಹೊಂದಿದ.

	1613ರಲ್ಲಿ ಇವನ ಎಂಟನೆಯ ಹೆನ್ರಿ ಎಂಬ ನಾಟಕ ಪ್ರದರ್ಶನ ನಡೆಯುತ್ತಿದ್ದಾಗ ಆದ ಬೆಂಕಿಯ ಪ್ರಮಾದದಿಂದ ಗ್ಲೋಬ್ ಥಿಯೇಟರ್ ಪೂರ್ಣವಾಗಿ ಸುಟ್ಟುಹೋಯಿತು. ಇಂಗ್ಲೆಂಡಿನ ರಾಜಾಶ್ರಯದಲ್ಲಿ ವೈಭವದಿಂದ ಮೆರೆದು ಇವನ ನಾಟಕಗಳೆಲ್ಲವೂ ಲೋಕಕ್ಕೆ ಮೊದಲಬಾರಿಗೆ ಪ್ರದರ್ಶಿತವಾಗಿ, ಇಂಗ್ಲಿಷ್ ನಾಟಕದ ಸುವರ್ಣಯುಗ ವೆಂದೆನಿಸಿದ ಆ ಕಾಲದ ಚೈತನ್ಯಕೇಂದ್ರವೆನಿಸಿದ ಈ ನಾಟಕಮಂದಿರ-ಗ್ಲೋಬ್ ಥಿಯೇಟರ್ ಸುಟ್ಟು ಬೂದಿಯಾಗಿ ಕಾಲದ ಪ್ರವಾಹದಲ್ಲಿ ಬೆರೆತು ಮರೆಯಾಯಿತು. ಅದರೊಂದಿಗೆ ಈತನ ನಾಟಕರಚನಾ ಕಾಲದ ಮಹಾಂಕದ ಕೊನೆಯ ತೆರೆಯೂ ಬಿದ್ದಿತು. ನಾಟಕ ಜೀವನಕ್ಕೆ ಶರಣು ಹೊಡೆದು ಸಂಪೂರ್ಣವಾಗಿ ಸ್ಟ್ರ್ಯಾಟ್‍ಫರ್ಡಿನ ನಾಗರಿಕನೂ ಗೃಹಸ್ಥನೂ ಆದ. ಈತನ ವಿಶ್ರಾಂತಜೀವನವೂ ಬಹಳ ವರ್ಷ ಮುಂದುವರಿಯಲಿಲ್ಲ. ಕೊನೆಯ ಮೂರು ವರ್ಷ ಹೇಗೆ ಕಳೆದುವೆಂಬುದರ ವಿವರಗಳು ದೊರೆಯುವುದಿಲ್ಲ. ತೃಪ್ತಿ, ಸಮಾಧಾನಗಳಿಂದ ಕೂಡಿ ಶಾಂತವಾಗಿಯೇ ಕಳೆದಿರಬೇಕು. ಒಮ್ಮೆ ಲಂಡನ್ನಿಗೆ ಹೋಗಿ ಬಂದನೆಂಬ ಸುಳಿವಿನ ದಾಖಲೆ ಇದೆ. 1616ರ ಫೆಬ್ರವರಿಯಲ್ಲಿ ಎರಡನೆಯ ಮಗಳು ಜೂಡಿತ್‍ಳ ಮದುವೆ ಕ್ವಿನಿ ಎಂಬಾತನೊಂದಿಗೆ ಆಯಿತು. ಸೇಂಟ್‍ಜಾರ್ಜ್ ಪುಣ್ಯದಿನವಾಗಿದ್ದ 1616 ಏಪ್ರಿಲ್ 23ರಂದು ಈತ ತನ್ನ 52ನೆಯ ವಯಸ್ಸಿನಲ್ಲಿ ನಿಧನನಾದ. ಕಾಯಿಲೆಯಿಂದ ನರಳಿ ಸತ್ತನೊ, ಇದ್ದಕ್ಕಿದ್ದಂತೆ ತೀರಿಹೋದನೋ ಖಚಿತವಾಗಿ ತಿಳಿಯದು. ಮಿತ್ರರಾದ ಬೆನ್‍ಜಾನ್ಸನ್ ಮತ್ತು ಡ್ರೇಟರ್‍ರೊಡನೆ ಮೋಜಿಗಾಗಿ ಚೆನ್ನಾಗಿ ಕುಡಿದ ಪರಿಣಾಮವಾಗಿ ತೀವ್ರ ಅಸ್ವಸ್ಥತೆಯುಂಟಾಗಿ ತೀರಿಕೊಂಡನೆಂಬ ಪ್ರತೀತಿಯೂ ಉಂಟು. ನಿಧನಹೊಂದಿದ್ದೇನೋ ಸ್ಟ್ರ್ಯಾಟ್‍ಫರ್ಡಿನಲ್ಲೇ. ಅಲ್ಲಿಯೇ ಹೋಲಿ ಟ್ರಿನಿಟಿ ಚರ್ಚಿನ ಆವರಣದಲ್ಲಿ  ಈತನನ್ನು ಸಮಾಧಿ ಮಾಡಿದರು. ಸಮಾಧಿಯ ಶಿಲಾ ಫಲಕದ ಮೇಲೆ ಕೆತ್ತಿರುವ ಮಾತು ಹೀಗಿದೆ:

	``ಸನ್ಮಿತ್ರರೇ, ಯೇಸುವಿನ ಮೇಲಿನ ಭಕ್ತಿಯಿಂದಾದರೂ ಇಲ್ಲಿ ಮುಚ್ಚಿಟ್ಟಿರುವ ಹುಡಿಯನ್ನು ಅಗೆದು ತೆಗೆಯದಿರಿ; ಈ ಕಲ್ಲುಗಳನ್ನು ಅಲುಗಿಸಿದವರಿಗೆ ದೇವರ ಕೃಪೆಯಿರಲಿ; ನನ್ನ ಎಲುಬುಗಳನಿಲ್ಲಿಂದ ಸರಿಸಿದವರಿಗೆ ಶಾಪ ತಟ್ಟಲಿ. ಸಮಾಧಿಯ ಸ್ಮಾರಕ ಪ್ರತಿಮೆ ಸ್ಥಾಪಿತವಾ ದುದು 1623ರ ಒಳಗೆ. 1623ರಲ್ಲಿ ತೀರಿಹೋದ ಹೆಂಡತಿ ಆ್ಯನಿಹ್ಯಾಥವೇಳ ಸಮಾಧಿಯನ್ನು ಇದರ ಪಕ್ಕದಲ್ಲೇ ನಿರ್ಮಿಸಲಾಯಿತು. ಇದಕ್ಕೆ ಸ್ವಲ್ಪದೂರದಲ್ಲಿ 1649ರಲ್ಲಿ ತೀರಿಹೋದ ಮೊದಲ ಮಗಳು ಸುಸನ್ನಾಳ ಸಮಾಧಿ ಇದೆ.

	ಸಾಯುವುದಕ್ಕೆ ಕೇವಲ ಒಂದು ತಿಂಗಳ ಮುಂಚೆ ಈತ ತನ್ನ ಉಯಿಲನ್ನು ಪರಿಷ್ಕರಿಸಿ ರುಜುಮಾಡಿದ. ಎರಡನೆಯ ಮಗಳು ಜೂಡಿತ್‍ಗೂ ತಂಗಿ ಜೋನ್‍ಹಾರ್ಟ್‍ಗೂ ಕೊಂಚ ವರಮಾನ ಬರುವಂತೆ ಆಸ್ತಿಯ ಪಾಲಿತ್ತು. ಉಳಿದೆಲ್ಲವನ್ನೂ ಮೊದಲ ಮಗಳ ಹೆಸರಿಗೆ ಬರೆದು ಅವಳೊಂದಿಗೇ ತನ್ನ ಹೆಂಡತಿ ಇರುತ್ತಾಳೆಂದೊ ಏನೋ ಹೆಂಡತಿಗೆ ಆಸ್ತಿಯಲ್ಲಿ ಯಾವ ಪಾಲನ್ನೂ ಕೊಡದೆ ಎರಡನೆಯ ಅತ್ಯುತ್ತಮ ಮಂಚವನ್ನು ಮಾತ್ರ ಕೊಟ್ಟಿರುವುದಾಗಿ ಉಯಿಲಿನಲ್ಲಿ ಸೂಚಿಸಿರುವುದರ ಕಾರಣ ನಿಗೂಢವಾಗಿಯೇ ಉಳಿದಿದೆ. ಹೆಂಡತಿಯ ಬಗ್ಗೆ ಈತನಿಗೆ ಪ್ರೀತಿಯಿದ್ದುದು ಯಾವಾಗಲೂ ಅಷ್ಟಕ್ಕಷ್ಟೆ ಎಂದು ವ್ಯಾಖ್ಯಾನಿಸಲು ಉಯಿಲಿನ ಈ ಅಂಶವನ್ನು ಉದಾಹರಿಸಲಾಗುತ್ತದೆ. ಎರಡನೆಯ ಅತ್ಯುತ್ತಮ ಶಯನ ಹೆಂಡತಿಗೆ ಎಂಬುದು ತನ್ನ ಮೊದಲಿನ ಪ್ರೀತಿ, ನಿಷ್ಠೆ ಕಾವ್ಯ (ನಾಟಕ) ಕಲಾ ರಮಣಿಗೆ ಎಂಬರ್ಥದ ಸಂಕೇತವಿರಬಹು ದೆಂದು ತೋರುತ್ತದೆ. ಈತ ತನ್ನ ವಂಶ ಅಭಿವೃದ್ಧಿಹೊಂದಬೇಕು, ಆಸ್ತಿಸಂಪತ್ತುಗಳನ್ನು ಮುಂದಿನ ಅನೇಕ ಪೀಳಿಗೆಗಳ ತನ್ನ ಸಂತಾನ ಅಭಿಮಾನದಿಂದ ನೆನೆಯಬೇಕು, ಅನುಭವಿಸಬೇಕು ಎಂಬಿತ್ಯಾದಿ ಕೌಟುಂಬಿಕ ಆಶೋತ್ತರಗಳನ್ನು ಇರಿಸಿಕೊಂಡಿದ್ದ. ಆದರೆ ಇದ್ದ ಒಬ್ಬನೇ ಮಗ ಚಿಕ್ಕವಯಸ್ಸಿನಲ್ಲೇ ತೀರಿಹೋದ. ಉಳಿದ ಇಬ್ಬರು ಪುತ್ರಿಯರಲ್ಲಿ ಸುಸನ್ನಳಿಗಿದ್ದ ಒಂದೇ ಸಂತಾನವಾಗಿದ್ದ ಮಗಳು ಎಲಜಬೆತ್ ಹಾಲ್, ಥಾಮಸ್‍ನ್ಯಾಷ್‍ನನ್ನೂ ಅವನ ನಿಧನಾನಂತರ, ಸರ್‍ಜಾನ್ ಬರ್ನಾರ್ಡ್‍ನನ್ನೂ ಮದುವೆಯಾದಳು. ಆದರೆ ಮಕ್ಕಳೇ ಆಗದೆ ತೀರಿಹೋದಳು. ಎರಡನೆಯ ಮಗಳು ಜೂಡಿತ್‍ಗೆ ಮೂರುಜನ ಪುತ್ರರಾದರೂ ಅವರು ಅವಳಿಗೂ ಮುಂಚೆಯೇ ತೀರಿಹೋದರು. ತಂಗಿ ಜೋನ್‍ಹಾರ್ಟ್‍ಳ ಎರಡನೆಯ ಮಗ ಥಾಮಸ್‍ನ ಸಂತತಿ ಮಾತ್ರ ಮುಂದುವರಿಯಿತು. ಈಗಲೂ ಈ ವಂಶದವರು ಇದ್ದು ಇವರು ತಾವು ಈತನ ಸಮೀಪದ ಬಂಧುಗಳೆಂದು ಹೇಳಿಕೊಂಡು ಹೆಮ್ಮೆಪಡುತ್ತಾರೆ. ಈತನ ವಂಶದ ಹೆಸರನ್ನು ಉಳಿಸಿಕೊಂಡುಬಂದು ಚಿರಸ್ಮರಣೀಯವನ್ನಾಗಿ ಮಾಡಿರುವ ಸಂತಾನ ಎಂದರೆ ಇವನ ಕಾವ್ಯ ಹಾಗೂ ನಾಟಕ ಕೃತಿಗಳು ಮಾತ್ರ.

	ಕೃತಿ ರಚನೆಯ ನಾಲ್ಕು ಘಟ್ಟಗಳು: ಈತನ ಸುಮಾರು ಇಪ್ಪತ್ತೈದು ವರ್ಷಗಳ ಸಾಹಿತ್ಯ ರಚನ ಕಾಲವನ್ನು ವಿದ್ವಾಂಸರು ನಾಲ್ಕು ಘಟ್ಟಗಳಾಗಿ ವಿಂಗಡಿಸಿದ್ದಾರೆ.
ದಾಖಲೆಗಳ ಆಧಾರದ ಮೇಲೆ ರಚಿತವಾಗಿರುವ ನಾಲ್ಕು ಘಟ್ಟಗಳ ಕೃತಿರಚನ ಪಟ್ಟಿ ಹೀಗಿದೆ:

ಘಟ್ಟ	ಅವಧಿ	ಹರ್ಷಕಗಳು	ರುದ್ರನಾಟಕಗಳು	ಐತಿಹಾಸಿಕ	 1	1585	ಕಾಮೆಡಿ ಆಫ್	ಟೈಟಸ್	ಹೆನ್ರಿ ಗಿI, 
		ಎರರ್ಸ್, ಟೇಮಿಂಗ್	ಆಂಡ್ರೋ	I, II, III 
		ಆಫ್ ದ ಷ್ರೂ, ಟೂ 	ನಿಕಸ್	ರಿಚರ್ಡ್ III,
		ಜೆಂಟ್ಲ್‍ಮನ್ ಆಫ್		ಕಿಂಗ್ ಜಾನ್
		ವೆರೋನ
	1594	ಲವ್ಸ್ ಲೇಬರ್	ಕಾವ್ಯಗಳು:	ಐತಿಹಾಸಿಕ:
		ಲಾಸ್ಟ್	ಪೌರಾಣಿಕ: ವೀನಸ್	ರೇಪ್ ಆಫ್ 
			ಅಂಡ್ ಅಡೋನಿಸ್	ಲೂಕ್ರೀಸ್
2	1594	ಮಿಡ್‍ಸಮರ್	ರೋಮಿಯೊ	ರಿಚರ್ಡ್  II,
		ನೈಟ್ಸ್ ಡ್ರೀಮ್,	ಅಂಡ್	ಹೆನ್ರಿ Iಗಿ,
		ಮರ್ಚೆಂಟ್	ಜೂಲಿಯಟ್	ಹೆನ್ರಿ  ಗಿ,
		ಆಫ್ ವೆನಿಸ್,
		ಮೆರಿ ವೈವ್ಸ್ 
		ಆಫ್ ವಿಂಡ್ಸರ್,
		ಮಚ್ ಆಡೂ 
		ಎಬೌಟ್ ನಥಿಂಗ್
	1599	ಆ್ಯಸ್ ಯೂ 
		ಲೈಕ್ ಇಟ್
3	1599	ಟ್ವೆಲ್ತ್ ನೈಟ್,	ರೋಮನ್:
		ಟ್ರಾಯ್ಲಸ್ ಅಂಡ್ 	ಜೂಲಿಯಸ್
		ಕ್ರೆಸೀಡ, ಮೆಷರ್	ಸೀಸರ್,ಆಂಟನಿ
		ಫಾರ್ ಮೆಷರ್,	ಅಂಡ್
		ಆಲ್ ಈಸ್ ವೆಲ್	ಕ್ಲಿಯೋಪಾತ್ರ,
	         ದಟ್ ಎಂಡ್ಸ್ ವೆಲ್	ಕೋರಿಯೊ
			ಲೇನಸ್,
			ಇತರ;
			ಹ್ಯಾಮ್ಲೆಟ್,
			ಒಥೆಲೊ, ಟೈಮನ್
			ಆಫ್ ಅಥೆನ್ಸ್, 
			ಕಿಂಗ್‍ಲಿಯರ್, ಮ್ಯಾಕ್‍ಬೆತ್
4	1608	ಪೆರಿಕ್ಲಿಸ್		ಹೆನ್ರಿ  ಗಿIII
		ಸಿಂಬೆಲಿನ್
	   		ದ ವಿಂಟರ್ಸ್ ಟೇಲ್,
    1608 	            	ದ ಟೆಂಪೆಸ್ಟ್

	ಮೊದಲನೆಯ ಘಟ್ಟ: 1585-94. ನಾಟಕ ರಚನೆಯ ಆರಂಭಕಾಲ. ಈತನ ಆಸಕ್ತಿ ಮೊದಲ ಪ್ರಯತ್ನಗಳು, ಪ್ರತಿಭೆಯ ಮುಂಬೆಳಕು ಕಾಣುತ್ತವೆ. ಮೊದಲ ರಚನೆಗಳಲ್ಲೇ ಯಶಸ್ಸು ಜನಪ್ರಿಯತೆಗಳನ್ನುಗಳಿಸಿದ ಕಿರಿಪ್ರಾಯದ ನಾಟಕಕಾರ ಶ್ರೇಷ್ಠಕೃತಿಗಳನ್ನು ನಿರ್ಮಾಣಮಾಡುವ ಭರವಸೆಯನ್ನುಂಟುಮಾಡಿದ. ಹರ್ಷಕಗಳು, ರುದ್ರನಾಟಕಗಳು ಐತಿಹಾಸಿಕ ನಾಟಕಗಳು ಎಂಬ ಮೂರು ಪ್ರಭೇದಗಳಲ್ಲೂ ತಾನು ಸಮರ್ಥ ಎಂಬುದನ್ನು ತೋರಿಸಿಕೊಟ್ಟ. ಅದರಲ್ಲೂ ನವೋದಯದ ಕಾಲದ ದೊಡ್ಡ ಮೌಲ್ಯವಾಗಿದ್ದ ರಾಷ್ಟ್ರಾಭಿಮಾನವನ್ನು ಎತ್ತಿಹಿಡಿಯುವ ಇಂಗ್ಲಿಷ್ ಐತಿಹಾಸಿಕ ನಾಟಕಗಳನ್ನು ರಚಿಸಿ ತನ್ನ ವಿಶೇಷ ಒಲವಾದ-ಉತ್ಕಟ ರಾಷ್ಟ್ರಭಕ್ತಿಯನ್ನು ವ್ಯಕ್ತಪಡಿಸಿದ. ಹರ್ಷಕಗಳಲ್ಲಿ ಹರೆಯದ ಸ್ವಚ್ಛಂದ ಉಲ್ಲಾಸ, ಕಲ್ಪನಾವಿಲಾಸ, ಭಾವೋತ್ಕಟತೆ, ಚಮತ್ಕಾರಯುಕ್ತವಾದ ಸನ್ನಿವೇಶ ಜೋಡಣೆ ಇವು ಜನಪ್ರಿಯತೆಯನ್ನು ತಂದುಕೊಟ್ಟ ಅಂಶಗಳಾಗಿವೆ. ಈ ಕಾಲದಲ್ಲಿ ರಚಿಸಿದ ಒಂದೇ ಒಂದು ರುದ್ರನಾಟಕ “ಟೈಟಸ್ ಆಂಡ್ರೋನಿಕಸ್”. ಇನ್ನೂ ಅಪಕ್ವಸ್ಥಿತಿಯಲ್ಲಿರುವ ಪ್ರತೀಕಾರ, ರಕ್ತಪಾತಗಳ ಕಥಾವಸ್ತುವಿರುವ ನಾಟಕ.

	ಎರಡನೆಯ ಘಟ್ಟ: 1594-99. ಈ ಕಾಲದಲ್ಲಿ ಆರು ಹರ್ಷಕಗಳನ್ನೂ ಐದು ಇಂಗ್ಲಿಷ್ ಐತಿಹಾಸಿಕ ನಾಟಕಗಳನ್ನೂ ಒಂದು ರುದ್ರನಾಟಕವನ್ನೂ ರಚಿಸಿದ. ನಾಟಕಕಾರನ ಲೇಖನಿ ಆಗಲೇ ಹದಗೊಂಡಿರುವುದು ಕಾಣುತ್ತದೆ. ಹರ್ಷ-ವಿಷಾದಗಳನ್ನು ಪರಿಣಾಮಕಾರಿಯಾಗಿ ಬೆರೆಸುವ ಹದವನ್ನೂ ನಾಟಕಕಾರ ಅರಿತಿದ್ದ. ಆದರೂ ತುಂಬಾ ಸಮರ್ಥನೆನಿಸಿ ಪ್ರಶಂಸೆ ಪಡೆದಿದ್ದು ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಎಂಬ ಹರ್ಷಕದಿಂದ. ಬಹುಸುಂದರವಾದ ಸ್ವಪ್ನಲೋಕವನ್ನು ಮಧುರವಾದ ಸಂಗೀತದೊಡನೆ ಸೃಜಿಸಿ ಕಣ್ಮನಗಳನ್ನು ಸಂತುಷ್ಟಗೊಳಿಸುತ್ತಾನೆ. ದ ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ರಮ್ಯತೆ, ಉಲ್ಲಾಸಗಳ ಜೊತೆಗೆ ವಿಷಾದದ ದಟ್ಟವಾದ ಛಾಯೆಯೂ ಸೇರುತ್ತದೆ. ಕಥೆಯನ್ನು ಅತ್ಯಂತ ಚಮತ್ಕಾರಯುತವಾದ ಸಂವಿಧಾನ ಕೌಶಲದಿಂದ ಉದ್ದಕ್ಕೂ ಕುತೂಹಲ ಪೋಷಕವಾಗಿರುವಂತೆ ನಿರೂಪಿಸಿರುವುದು. ಇದರಿಂದಲೇ ಈ ಎರಡು ನಾಟಕಗಳೂ ಅತ್ಯಂತ ಜನಪ್ರಿಯವಾಗಿವೆ.

	“ರೋಮಿಯೊ ಅಂಡ್ ಜೂಲಿಯಟ್” ಈ ಅವಧಿಯಲ್ಲಿ ರಚಿತವಾದ ಏಕೈಕ ರುದ್ರನಾಟಕ, ಇದರ ವಸ್ತು ಈತನ ಮಾಯಾದಂಡದಿಂದ ಅಮರ ಪ್ರೇಮ ಕಥೆಯಾಗಿದೆ. ಇದರ ಕಾವ್ಯಮಯತೆ, ಹೃದಯಸ್ಪರ್ಶಿ ಭಾವತೀವ್ರತೆ, ಮುಗ್ಧತೆ ಮೋಹಕವಾಗಿದೆ. ಈ ಅವಧಿಯಲ್ಲಿ ಪ್ರಧಾನವಾಗಿರುವುದು ನಾಟಕಕಾರನ ಹರ್ಷಮನೋಧರ್ಮ, ಯಾವ ತತ್ತ್ವಬೋಧನೆಯೂ ಇಲ್ಲ; ಆದರ್ಶದ ಪ್ರತಿಪಾದನೆಯೂ ಇಲ್ಲ. ಮಾನವೀಯ ಸಹಜ ಸಂವೇದನೆಗಳಿಂದ ತುಂಬಿದ ಜೀವನದ ಕಲಾತ್ಮಕ ಪ್ರತಿಬಿಂಬವನ್ನು ಮಾತ್ರ ಈ ನಾಟಕಗಳಲ್ಲಿ ಕಾಣುತ್ತೇವೆ. ಬದುಕಿನ ಮುಖ್ಯ ಸೆಳೆತವಾದ ಪ್ರೇಮದ ವೈವಿಧ್ಯಮಯಚಿತ್ರ ಬಹುಸುಂದರವಾಗಿ ಮನೋಜ್ಞವಾಗಿ ಮೂಡಿರುವುದನ್ನು ನೋಡುತ್ತೇವೆ.

	ಈತ ಇಂಗ್ಲಿಷ್ ಚರಿತ್ರೆಯಿಂದ ಆಯ್ದ ವಸ್ತುಗಳ ಮೇಲೆ ರಚಿಸಿದ ಒಟ್ಟು ಹತ್ತು ನಾಟಕಗಳಲ್ಲಿ ಎಂಟನೆಯ ಹೆನ್ರಿ(ಹೆನ್ರಿ ಗಿIII, ಇದು ಕೊನೆಯ ಘಟ್ಟದ ಅವಧಿಯಲ್ಲಿ ರಚಿತವಾಯಿತು) ಒಂದು ಬಿಟ್ಟು ಉಳಿದ ಒಂಬತ್ತು ನಾಟಕಗಳೂ (ಮೊದಲ ಅವಧಿಯಲ್ಲಿ4, ಎರಡನೆಯ ಅವಧಿಯಲ್ಲಿ 5) ಈ ಎರಡು ಘಟ್ಟಗಳೊಳಗೆ ರಚಿತವಾಗಿ ರಂಗದ ಮೇಲೆ ಬಂದಿದ್ದವು.

	ಎರಡು ಶತಮಾನಗಳ ಹಿಂದಿನ ಇಂಗ್ಲಿಷ್ ಚಾರಿತ್ರಿಕ ಘಟನೆಗಳನ್ನು ವಸ್ತುಮಾಡಿಕೊಂಡು ಎರಡು ಐತಿಹಾಸಿಕ ನಾಟಕ ಚಕ್ರಗಳನ್ನು ಬರೆದು ಮನ್ನಣೆ ಪಡೆದುದು ಒಂದು ವಿಶೇಷ. ಐತಿಹಾಸಿಕ ಘಟನೆ ಹಾಗೂ ಪಾತ್ರಗಳ ಮುಖಾಂತರ ಪ್ರಪಂಚಸಾಮಾನ್ಯವಾದ ಮಾನವ ಸ್ವಭಾವದ ನಾನಾ ಪರಿಗಳನ್ನು ಅವಲೋಕಿಸಿದುದಲ್ಲದೆ ಸಮಕಾಲೀನ ದೃಷ್ಟಿಯ ಭಾವನೆ, ವಿಚಾರಗಳನ್ನು ಸಹಜವೆಂಬಂತೆ ಬೆರಸಿ ಗತಕಾಲಕ್ಕೆ ವರ್ತ ಮಾನದ ಪ್ರಸ್ತುತೆಯನ್ನೂ ಜೀವಂತಿಕೆಯನ್ನೂ ತುಂಬಿ ದೃಶ್ಯೀಕರಿಸಿದುದು ಇನ್ನೊಂದು ಅಸಾಧಾರಣ ಸಾಧನೆ. ಕವಿ ಸೇರಿಸಿದ ಕಲ್ಪನಾ ಭಾಗಗಳ ಮೇಲೂ ಐತಿಹಾಸಿಕ ಸತ್ಯ ಎಂಬ ಭ್ರಮೆಯ ಮುದ್ರೆ ಸಹ ಬಿದ್ದಿತು. ಇಂಗ್ಲಿಷ್ ಚರಿತ್ರೆಗೆ ಸಂಬಂಧಿಸಿದ್ದೆಂಬ ಕಾರಣದಿಂದ ಈ ನಾಟಕಗಳನ್ನು ನೋಡಿದ ಇಂಗ್ಲಿಷ್ ಪ್ರಜೆಗಳಲ್ಲಿ ಉತ್ಕಟ ದೇಶಭಕ್ತಿ ಉದ್ದೀಪನ ಗೊಂಡಿತು. ರಾಜ ಪ್ರಜೆಗಳ ಸಂಬಂಧ ಸಾಮಾಜಿಕ ವ್ಯವಸ್ಥೆ, ಆಡಳಿತ, ರಾಜನ ಕರ್ತವ್ಯಗಳ ಬಗ್ಗೆ ಆದರ್ಶ ವಿಚಾರಗಳು ಈ ನಾಟಕಗಳಲ್ಲಿ ಬರುತ್ತವೆ. ಪ್ರಪಂಚಸಾಹಿತ್ಯದಲ್ಲೇ ಈ ಐತಿಹಾಸಿಕ ನಾಟಕಗಳು ಶ್ರೇಷ್ಠವೆನಿಸಿವೆ.

	ಈ ಕಾಲದಲ್ಲಿ ರಚಿತವಾದ ಹರ್ಷಕಗಳೂ ತುಂಬ ಜನಪ್ರಿಯವಾಗಿವೆ. ಈ ಕಾಲದ ಏಕೈಕ ರುದ್ರನಾಟಕ ರೋಮಿಯೊ ಅಂಡ್ ಜೂಲಿಯಟ್ ಒಂದು ಮಹೋನ್ನತ ಕೃತಿ. ಹದಿಹರೆಯದ ಮುಗ್ಧ ಭಾವೋತ್ಕಟತೆ, ಆದರ್ಶ ದೃಷ್ಟಿ, ಎದೆ ಮಿಡಿಯುವ ಕಥೆ, ಸನ್ನಿವೇಶಗಳು ಅಲ್ಲಲ್ಲಿ ಮನಸೆಳೆಯುವ ಕಾವ್ಯಭಾಗಗಳು ಇದ್ದು ಇಡೀ ನಾಟಕವೇ ಒಂದು ಮಧುರ ಭಾವಗೀತೆಯೂ ಆಗಿದೆ.       
	ಮೂರನೆಯ ಘಟ್ಟ: 1599-1608. ರುದ್ರನಾಟಕ ಪ್ರಧಾನವಾದುದು. ಹ್ಯಾಮ್ಲೆಟ್, ಒಥೆಲೊ, ಕಿಂಗ್‍ಲಿಯರ್, ಮ್ಯಾಕ್‍ಬೆತ್ ಎಂಬ ಮಹಾರುದ್ರ ನಾಟಕಗಳಲ್ಲದೆ ಜೂಲಿಯಸ್ ಸೀಸರ್, ಆಂಟನಿ ಅಂಡ್ ಕ್ಲಿಯೋಪಾತ್ರ, ಕೋರಿಯೊಲೇನಸ್ ಎಂಬ ಮೂರು ರೋಮನ್ ಚಾರಿತ್ರಿಕ ರುದ್ರನಾಟಕ ಗಳೂ ಟೈಮನ್ ಆಫ್ ಅಥೆನ್ಸ್-ಹೀಗೆ ಒಟ್ಟು ಎಂಟು ರುದ್ರನಾಟಕಗಳು ರಚಿತವಾದವು. ನಾಲ್ಕು ಹರ್ಷಕಗಳಲ್ಲಿ ಟ್ವೆಲ್ತ್ ನೈಟ್ ಪ್ರಸಿದ್ಧವಾಗಿದೆ.

	ಇದುವರೆಗೆ ಹರ್ಷದ ಅಲೆಗಳ ಮೇಲೆ ಸ್ವಚ್ಛಂದವಾಗಿ ಉಲ್ಲಾಸದಿಂದ ತೇಲುತ್ತಿದ್ದ ಕವಿಯ ಮನಸ್ಸು ಜೀವನದ ಕಾವು, ನೋವು, ದುಃಖಗಳ ಕಹಿ ಅನುಭವದಿಂದ ಚಿಂತನಶೀಲವಾಗಿ ಆಳಕ್ಕಿಳಿದು ಚಿರಂತನ ಸಮಸ್ಯೆಗಳ ಜಟಿಲತೆಯನ್ನು ದರ್ಶಿಸುತ್ತದೆ. ಅಲ್ಲದೆ ನಾಟಕಕಾರ ರಚನಾತಂತ್ರದಲ್ಲಿ ಹೆಚ್ಚು ಹೆಚ್ಚು ಕುಶಲನಾಗುತ್ತಿರುವುದು ಗಮನಕ್ಕೆ ಬರುತ್ತದೆ. ಗದ್ಯವಾಗಲಿ ಕಾವ್ಯವಾಗಲಿ ಭಾಷೆಯ ನಿರ್ವಹಣೆ ಉತ್ಕøಷ್ಟವಾಗಿದೆ. ಪದಗಳ ಬಳಕೆಯಲ್ಲಿ ಒಳ್ಳೆಯ ಪ್ರಭುತ್ವ, ಔಚಿತ್ಯಜ್ಞಾನ ಇರುವುದು ಕಾಣುತ್ತದೆ. ಹೀಗೆ ಸಂವಿಧಾನ, ಸಂವಾದ, ಪಾತ್ರಪುಷ್ಟಿ, ಆಳವಾದ ಚಿಂತನ, ಮನೋ ವ್ಯಾಪಾರದ ವಿಶ್ಲೇಷಣೆ, ದರ್ಶನ, ಭಾಷಾ ಪ್ರಯೋಗ ಈ ಎಲ್ಲದರಲ್ಲೂ ಶ್ರೇಷ್ಠತೆಯನ್ನು ಮುಟ್ಟಿರುವ ಒಥೆಲೊ, ಮ್ಯಾಕ್‍ಬೆತ್, ಕಿಂಗ್ ಲಿಯರ್ ನಾಟಕಗಳಂತೂ ವಿರಾಡ್‍ಭೂಮಿಕೆಯ ಮಹಾರುದ್ರನಾಟಕಗಳಾಗಿವೆ. ಟ್ರಾಯ್ಲಸ್ ಅಂಡ್ ಕ್ರೆಸೀಡ, ಆಲ್‍ಈಸ್‍ವೆಲ್ ದಟ್ ಎಂಡ್ಸ್‍ವೆಲ್, ಮೆಷರ್ ಫಾರ್ ಮೆಷರ್-ಇವು ಸುಖಾಂತ ಎಂಬ ಅರ್ಥದಲ್ಲಿ ಮಾತ್ರ ಹರ್ಷಕಗಳೆನಿಸಿವೆ. ಅಲ್ಲದೆ ಇವು ಕಹಿ ಮತ್ತು ವ್ಯಂಗ್ಯ ಬೆರೆತ ಸಮಸ್ಯಾತ್ಮಕ ನಾಟಕಗಳೂ ಆಗಿರುವುದು ನಾಟಕಕಾರನ ಬೆಳೆವಣಿಗೆ ಹಾಗೂ ಜೀವನಾನುಭವ ಸಾಂದ್ರತೆಯನ್ನು ಸ್ಪಷ್ಟಗೊಳಿಸುತ್ತವೆ.

	ನಾಲ್ಕನೆಯ ಘಟ್ಟ: 1608-1613. ಈ ಕೊನೆಯ ಘಟ್ಟದಲ್ಲಿ ಹೆನ್ರಿ ದ ಏಯ್ತ್ ಎಂಬ ಒಂದೇ ಒಂದು ಇಂಗ್ಲಿಷ್ ಚಾರಿತ್ರಿಕ ನಾಟಕ, ಪೆರಿಕ್ಲಿಸ್, ಸಿಂಬೆಲಿನ್, ದ ವಿಂಟರ್ಸ್ ಟೇಲ್, ದ ಟೆಂಪೆಸ್ಟ್ ಎಂಬ ನಾಲ್ಕು ನಾಟಕಗಳು ರಚಿತವಾದವು. ಟೂ ನೋಬೆಲ್ ಕಿನ್ಸ್‍ಮನ್ ಎಂಬ ರುದ್ರನಾಟಕವನ್ನು ಫ್ಲೆಚರ್ ಎಂಬ ನಾಟಕಕಾರ ಸಹೋದ್ಯೋಗಿ ಯೊಡನೆ ಬರೆದುದರಿಂದ ಅದನ್ನು ಈ ಪಟ್ಟಿಯಿಂದ ಬಿಟ್ಟುಬಿಡಲಾಗಿದೆ. ಇವನಿಗೆ ರುದ್ರನಾಟಕದ ರೋಷ, ಆಕ್ರೋಶ, ಆವೇಶ, ವಿಧಿಯ ಕ್ರೂರ ವಿಲಾಸ, ಮಾನವ ದೌರ್ಬಲ್ಯ ಮತ್ತು ಮಿತಿ, ಇವುಗಳಲ್ಲೆಲ್ಲ ಒಂದು ಹಂತದಲ್ಲಿ ಹರ್ಷಕಗಳ ಸ್ವಚ್ಛಂದ ಸಂತೋಷ, ಉಲ್ಲಾಸ, ಭಾವುಕತೆ, ಆದರ್ಶಪ್ರಿಯತೆಗಳಂತೆ ವಾಸ್ತವವೆನಿಸಿದರೂ ಬದುಕಿನ ಪೂರ್ಣಚಿತ್ರವಾಗು ವುದಿಲ್ಲವೆಂಬ ತಿಳಿವು ಮೂಡಿದೆ. ಜೀವನದ ದೃಷ್ಟಿ, ರಸ ವಿರಸಗಳನ್ನು ದಾಟಿ ಸಮರಸವನ್ನು ಪರಿಭಾವಿಸಿದೆ. ಮನಸ್ಸು ಪಕ್ವಗೊಂಡಿದೆ. ಸುಖ-ದುಃಖ, ನೋವು-ನಲಿವು, ಆಸೆ-ನಿರಾಸೆಗಳನ್ನು ದಾಟಿದ ನಿಜವಾದ ಸುಖನೆಮ್ಮದಿಗಳಿಂದ ಕೂಡಿದ ಅಲೌಕಿಕಶಾಂತಿಯ ಸ್ಥಿತಿಯನ್ನು ಮುಟ್ಟಿದೆ. ಬರೆಹದಲ್ಲೂ ಸಂಕ್ಷಿಪ್ತತೆ, ಬಿಗಿ, ಸಂಯಮಗಳು ಬಂದಿವೆ. ನಾದ ಲಯ-ಗೇಯಗುಣಗಳು ದಿವ್ಯತೆಯನ್ನು ಮೇಲ್ಮಟ್ಟಕ್ಕೇರಿಸಿವೆ.

	ಇದು ಕಲಾವಿದನ ದರ್ಶನದ ಪರಿಪೂರ್ಣತೆ. ಈತ ಪ್ರತಿಭಾವಂತ ನಾದ್ದರಿಂದ ಕೇವಲ ಐವತ್ತು ವರ್ಷಗಳ ಬದುಕಿನಲ್ಲೇ ಈ ಪರಿಪೂರ್ಣತೆ ಯನ್ನು ಕಂಡುಕೊಂಡ. ಇವನ ಸಾಹಿತ್ಯರಚನಾ ಕಾಲವಂತೂ ಕೇವಲ ಇಪ್ಪತ್ತೈದು ವರ್ಷ. ಈತನ ಅದ್ಭುತವಾದ ವೈವಿಧ್ಯಮಯ ಸೃಷ್ಟಿಯ ಅಂತರಂಗದಲ್ಲಿ ಮೊದಲಿಂದ ಕಡೆಯವರೆಗೂ ಏಕೈಕವಾಹಿನಿಯಾಗಿ ಹರಿಯುವ ಮಾನವ ಪ್ರೇಮವನ್ನು ಮಹಾಮಹಾಮೇಧಾವಿಗಳಿಂದ ಹಿಡಿದು ಸಾಮಾನ್ಯ ವಿಮರ್ಶಕರೂ ಸಹೃದಯರಾದ ಪಾಮರರರೂ ಗುರುತಿಸಿ ಮೆಚ್ಚಿಕೊಂಡಿದ್ದಾರೆ.

	ಇವನು ರಚಿಸಿದುದು 37 ನಾಟಕಗಳು, 2 ಕಾವ್ಯಗಳು, 154 ಸಾನೆಟ್ಟುಗಳು ಮತ್ತು ಕೆಲವು ಸಾನೆಟ್‍ಗಳು - ನೀಳ್ಗವನಗಳು (ಎ ಲವರ್ಸ್ ಕಂಪ್ಲೇಂಟ್, ದ ಫೀನಿಕ್ಸ್ ಅಂಡ್ ದ ಟರ್ಚಲ್, ದ ಪ್ಯಾಷನೇಟ್ ಪಿಲ್‍ಗ್ರಿಮ್, ಸಾನೆಟ್ಸ್ ಟು ಸಂಡ್ರಿ, ನೋಟ್ಸ್ ಆಫ್ ಮ್ಯೂಸಿಕ್). ಈತ ಬರೆದ ಬಹು ಸುಂದರವಾದ ಹಾಡುಗಳು ನಾಟಕಗಳಲ್ಲಿ ಬರುವ ವಿವಿಧ ಸಂದರ್ಭಗಳಿಗೆ ಹೊಂದುವಂತಹವಾದರೂ ಸ್ವತಂತ್ರವಾಗಿಯೂ ಕೇಳಿ ಆನಂದಿಸಬಹುದಾದಂಥವು. ಬರೆದ ಸಾಹಿತ್ಯ ಗಾತ್ರ ಬಹಳ ದೊಡ್ಡದೇನಲ್ಲ. ಆದರೆ 37 ನಾಟಕಗಳಲ್ಲಿ ಬರುವ ಸುಮಾರು ಸಾವಿರ ಪಾತ್ರಗಳು ಮಾನವ ಸ್ವಭಾವದ ವಿವಿಧ ಮುಖಗಳಿಗೆ ಹಿಡಿದ ಕನ್ನಡಿಗಳಂತಿವೆ. ಬಿಡಿಸಿ ಇಟ್ಟಿರುವ ಮಾನವ ಸ್ವಭಾವ, ಗುಣಾವಗುಣಗಳು ತೀರಾ ಸಹಜವಾಗಿರುವುದಲ್ಲದೆ ಸಾರ್ವತ್ರಿಕ, ಸಾರ್ವಕಾಲಿಕ ಸತ್ಯವಾಗಿಯೂ ಇವೆ. ಕೇವಲ ಕಲ್ಪಿತ ವ್ಯಕ್ತಿಗಳಂತೆ ತೋರದೆ ಜೀವಂತ ವ್ಯಕ್ತಿಗಳಾಗಿ ಕಾಣುವುದರಿಂದ, ಘಟನೆಗಳಾದರೂ ಕಟ್ಟುಕಥೆಯವಾಗಿರದೆ ಬದುಕಿನಲ್ಲಿ ಯಾವಕಾಲಕ್ಕೂ ವಾಸ್ತವವಾಗಿ ಕಾಣುವಂತಿರುವುದರಿಂದ-ಎಲ್ಲ ನಾಟಕಗಳಿಂದಲೂ ಮೂಡುವ ನಮ್ರ ಚಿತ್ರ, ಸಂಕ್ಷಿಪ್ತ ಪ್ರಪಂಚದ ದರ್ಶನದಂತಿದೆ. ಪಾತ್ರಗಳಿಗೆ ಜೀವದುಂಬಿದಂತೆ ಮಾತುಗಳಿಗೂ ಇವನು ಜೀವ ತುಂಬಿದ್ದಾನೆ. ಈತನ ಮಂತ್ರದಂಡದಿಂದ ಜೀವ ಸ್ಪರ್ಶವಾದಾಗ ಸಾಧಾರಣ ಆಡುಮಾತಿಗೂ ವಿಶೇಷ ಅರ್ಥ, ಕಸುವು, ಕಾಂತಿ ಕೂಡಿಕೊಳ್ಳುತ್ತವೆ.

	ಈತನ ಯಾವ ನಾಟಕದ ವಸ್ತುವೂ ಸ್ವಂತಸೃಷ್ಟಿಯಲ್ಲ. ಯಾವ ಯಾವುದೋ ಮೂಲದಿಂದ ಕಥೆಯನ್ನಾರಿಸಿಕೊಂಡಿದ್ದಾನೆ. ಪ್ಲುಟಾರ್ಕ್, ಹಾಲ್‍ಷೆಡ್, ಬೊಕಾಶಿಯೊ, ಪ್ಲುಟಸ್ ಇವರು ಬರೆದ-ಸಂಕಲಿಸಿದ-ಕಥೆಗಳೂ ಇತಿಹಾಸ ವೃತ್ತಾಂತಗಳೂ ಇವನ ನಾಟಕ ಕಥಾವಸ್ತುಗಳಾ ಗಿವೆ. ಆ ಕಥೆಗಳಿಗೆ ಜೀವತುಂಬಿ ನಾಟಕ ಸ್ವರೂಪವನ್ನು ಕೊಡುವ ಈತನ ಪ್ರತಿಭೆಯಲ್ಲಿ ಮೂಲದ ಸಾಧಾರಣ ಸಂಗತಿಗಳು ಹೊಸ ಬೆಳಕಿನಲ್ಲಿ ತೆರೆದುಕೊಂಡು ವಿಸ್ಮಯಕರ ಸನ್ನಿವೇಶಗಳಾಗಿ ಮೂಡುವಲ್ಲಿ ಇವನ ಸೃಜನಶೀಲತೆ ಎದ್ದು ಕಾಣುತ್ತದೆ. ಈತನ ನಾಟಕಗಳು ಭಾವಗಳಿಗೆ, ವಿವಿಧ ಆಶೋತ್ತರಗಳಿಗೆ, ವಿವಿಧ ಗುಣದೋಷಗಳಿಗೆ ಸಮರ್ಥ ಅಭಿವ್ಯಕ್ತಿಯನ್ನಿತ್ತು ಮಹಾ ಸಾಹಿತಿಯನ್ನಾಗಿಸಿವೆ. ಈತ ಕಣ್ಮರೆಯಾಗಿ ನಾಲ್ಕು ಶತಮಾನಗಳು ಕಳೆದರೂ ಈತನ ಕೀರ್ತಿಪ್ರತಿಭೆ ಇನ್ನೂ ವರ್ಧಿಸುತ್ತಲೇ ಇದೆಯೇ ಹೊರತು ಸ್ವಲ್ಪವೂ ಕುಂದಿಲ್ಲ, ಮಸುಕಾಗಿಲ್ಲ. ಇಂದಿಗೂ ಹೊಸ ಹೊಸ ಅರ್ಥ, ಹೊಸ ವ್ಯಾಖ್ಯಾನ, ಹೊಸ ಅನುಭವಗಳನ್ನು ಹೊಮ್ಮಿಸುತ್ತ ಇವನ ನಾಟಕಗಳು ನವನವೋ ನ್ಮೇಶಶಾಲಿಯಾಗಿವೆ. ಈತನನ್ನು ಮೀರಿಸುವ ಮತ್ತೊಬ್ಬ ನಾಟಕಕಾರ ಪ್ರಪಂಚದಲ್ಲಿ ಇದುವರೆಗೂ ಬಂದಿಲ್ಲ.

	ಸಮಗ್ರ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ: ಈತ ಬದುಕಿದ್ದಾಗ ಇವನ 16 ನಾಟಕಗಳು ಮಾತ್ರ ಯಾರು ಯಾರೋ ಸ್ವಾತಂತ್ರ್ಯವಹಿಸಿ ಬಿಡಿ ಬಿಡಿಯಾಗಿ ಮುದ್ರಿಸಿ ಪ್ರಕಟಿಸಿದ್ದರು. ಆರು ಪೆನ್‍ಗಳಿಗೊಂದರಂತೆ ಮಾರುತ್ತಿದ್ದರು. ಕೃತಿಕಾರನಿಗೆ ತೋರಿಸಿ ನಕಲು ಮಾಡುವಾಗಲೊ, ಮುದ್ರಿಸುವಾಗಲೊ ಆದ ತಪ್ಪುಗಳನ್ನು ತಿದ್ದಿಸುವ ಮಾತಿರಲಿ, ಅವನ ಅನುಮತಿಯನ್ನು ಸಹ ಕೇಳಿರಲಿಲ್ಲ. ನಾಟಕ ಶಾಲೆಯಿಂದ ಯಾವುದೋ ಒಂದು ಪ್ರತಿಯನ್ನು ಕದ್ದು ಮುಚ್ಚಿ ಪಡೆದು ತಂದು ಮುದ್ರಿಸಿದ್ದರು. ಆ ಕಾಲದಲ್ಲಿ ನಾಟಕ ಕಂಪನಿಯ ಮಾಲೀಕರು ತಾವು ಆಡಿಸುತ್ತಿದ್ದ ನಾಟಕಗಳನ್ನು ಉದ್ದೇಶಪೂರ್ವಕವಾಗಿಯೇ ಮುದ್ರಣಕ್ಕೆ ಕೊಡದೆ ಮುಚ್ಚಿಡುತ್ತಿದ್ದರು. ಬೇರೆ ನಾಟಕ ಮಂಡಲಿಯವರು ಜನಪ್ರಿಯವಾದ ಅದೇ ನಾಟಕವನ್ನು ಆಡಿಸಲು ಅವಕಾಶವಾಗಿ ಇದರಿಂದ ತಮ್ಮ ಏಕಸ್ವಾಮ್ಯದ ಲಾಭತಪ್ಪಿ ಅನಪೇಕ್ಷಿತ ಸ್ಪರ್ಧೆ ಏರ್ಪಡುವುದೆಂದು ಅವರ ಭಯ. ಹೀಗಾಗಿ ಈತ ತನ್ನ ನಾಟಕಗಳ ಮುದ್ರಣದ ಬಗ್ಗೆ ಆಸಕ್ತಿವಹಿಸುವಂತಿರಲಿಲ್ಲ. ಇವನನ್ನು ಕೇಳದೆ ಮುದ್ರಿಸಿದ ನಾಟಕಗಳ ಬಗ್ಗೆ ಏನೂ ಮಾಡುವಂತಿರಲಿಲ್ಲ. 1616ರ ಹೊತ್ತಿಗೆ, ಅಂದರೆ ನಾಟಕಕಾರನ ಮರಣದ ಹೊತ್ತಿಗೆ ಇವನ 21 ನಾಟಕಗಳು ಇನ್ನೂ ಹಸ್ತಪ್ರತಿ ರೂಪದಲ್ಲೇ ಇದ್ದವು. 6 ವರ್ಷಗಳ ಬಳಿಕ 1622ರಲ್ಲಿ  ಒಥೆಲೊ ಮಾತ್ರ ಬಿಡಿಯಾಗಿ ಮುದ್ರಣ ಕಂಡಿತು. ಈ ಬಿಡಿ ನಾಟಕಗಳನ್ನೆಲ್ಲ ದೊಡ್ಡಹಾಳೆಯನ್ನು ನಾಲ್ಕು ಮಡಿಕೆಯಾಗಿ ಮಡಿಚಿರುವ ಕ್ವಾರ್ಟೊ(ನಾಲ್ಕುದಳ) ಅಳತೆ ಆಕೃತಿಯ ಪುಸ್ತಕವಾಗಿ ಪ್ರಕಟಿಸಿದ ಕಾರಣ ಇವನ್ನು ಕ್ವಾರ್ಟೊ ಆವೃತ್ತಿಗಳೆನ್ನುತ್ತಾರೆ. 1623ರಲ್ಲಿ ಇವನ ಪ್ರಿಯಮಿತ್ರರೂ ರಂಗಭೂಮಿಯ ಸಹೋದ್ಯೋಗಿಗಳೂ ಆಗಿದ್ದ ಜಾನ್ ಹೆಮಿಂಗ್ ಮತ್ತು ಹೆನ್ರಿ ಕಾಂಡೆಲ್ ತಮ್ಮ ಗೌರವಾನ್ವಿತ ಮಿತ್ರನ ನೆನಪು ಸದಾ ಉಳಿಯಲೆಂದು ಈತನ ಎಲ್ಲ ನಾಟಕಗಳನ್ನೂ ಸಂಕಲಿಸಿ ಫೋಲಿಯೋ(ದೊಡ್ಡಹಾಳೆಯ ಎರಡೇ ಮಡಿಕೆಯ ಅಳತೆ ಆಕೃತಿಯ) ಸಂಪುಟದಲ್ಲಿ ಮುದ್ರಿಸಿ ಪ್ರಕಟಿಸಿದರು. ಇದೇ ಮೊದಲ ಹಾಗೂ ಅಧಿಕೃತ ಸಮಗ್ರಕೃತಿಗಳ ಸಂಪುಟ. ಮೊದಲ ಫೋಲಿಯೋ ಆವೃತ್ತಿ ಎಂದು ಇದು ಹೆಸರಾಗಿದೆ. ಇದರಲ್ಲಿ 36 ನಾಟಕಗಳು ಮಾತ್ರ ಇವೆ. 1609ರಲ್ಲಿ ಕ್ವಾರ್ಟೊ ಆವೃತ್ತಿಯಲ್ಲಿ ಪ್ರಕಟವಾದ “ಪೆರಿಕ್ಲಿಸ್” ಎಂಬ ನಾಟಕವನ್ನು ಇದರಲ್ಲಿ ಸೇರಿಸಿರಲಿಲ್ಲ. 1664ರಲ್ಲಿ ಪ್ರಕಟವಾದ ಮೂರನೆಯ ಫೋಲಿಯೋ ಆವೃತ್ತಿಯಲ್ಲಿ ಇದನ್ನೂ ಸೇರಿಸಿಕೊಳ್ಳಲಾಯಿತು.

	ನಾಟಕಶಾಲೆಯಿಂದ ಬಂದ ಹಸ್ತಪ್ರತಿಗಳಾಗಿದ್ದುದರಿಂದ ಎಷ್ಟೋ ಬರೆವಣಿಗೆಯ ತಪ್ಪುಗಳು ನಟರೋ ನಿರ್ದೇಶಕರೋ ಅಥವಾ ಬೇರೆಯ ವರೋ ತಾವೇ ಸೇರಿಸಿದ ಪ್ರಕ್ಷಿಪ್ತ ಎಂಬ ಸಾಲುಗಳು, ಅಭಿನಯಕ್ಕಾಗಿ ನಿರ್ದೇಶಕರು ಮಾಡಿದ ಬದಲಾವಣೆಗಳು ಎಲ್ಲ ಇವುಗಳಲ್ಲಿದ್ದವು. ಆ ಕಾಲದ ಮುದ್ರಣದಲ್ಲೂ ತಪ್ಪುಗಳು ಹೇರಳವಾಗಿರುತ್ತಿದ್ದವು. ಈ ದೋಷಪೂರಿತ ಪಾಠಗಳನ್ನು ಯಾರೂ ಸರಿಪಡಿಸಲಿಲ್ಲ. ಸ್ವತಃ ಈತನಿಗೂ ತಿದ್ದುವ ಅವಕಾಶ ಒದಗಲಿಲ್ಲ. 1623ರ ಸಂಪುಟದ ಪ್ರಥಮ ಆವೃತ್ತಿಯಲ್ಲಿ ಅಂತಹ ತಿದ್ದುಪಾಟುಗಳೇನೂ ಆಗಲಿಲ್ಲ. ಆದರೆ ಸಂಪಾದಕರಾದ ಹೆಮಿಂಗ್ ಮತ್ತು ಕಾಂಡೆಲ್‍ರಿಗೆ ಆತ ಬರೆದ ಭಾಗಗಳೆಲ್ಲ ಚೆನ್ನಾಗಿ ಗೊತ್ತಿದ್ದುದರಿಂದ ಅಧಿಕೃತ ಎಂದು ಹೇಳಬಹುದಾದ ಮೊದಲ ಪ್ರಕಟಣೆಯಾಗಿ ಇದಕ್ಕೆ ಮನ್ನಣೆ ಸಲ್ಲುತ್ತದೆ. ಅಲ್ಲಿಂದ ಇತ್ತೀಚಿನವರೆಗೆ ಅನೇಕ ವಿದ್ವಾಂಸರು ಈ ನಾಟಕಗಳ ಸಂಪಾದನಾಕಾರ್ಯವನ್ನು ಯಥಾಶಕ್ತಿ ಮಾಡಿದ್ದಾರೆ. ರೋವೆ(1709), ಅಲೆಕ್ಸಾಂಡರ್‍ಪೋಪ್(1725), ಸ್ಯಾಮ್ಯುಯಲ್ ಜಾನ್‍ಸನ್(1765), ಮೆಲೋನ್(1790) ಈ ಕೆಲವರನ್ನು ಹೆಸರಿಸಬಹುದು. 1733ರಲ್ಲಿ ಷೇಕ್‍ಸ್ಪಿಯರ್ ಸಮಗ್ರ ಕೃತಿ ಸಂಪುಟವನ್ನು ಹೊರತಂದ ಥಿಯೊಬಾಲ್ಡ್ ಎಂಬ ಸಂಪಾದಕರು 1768ರಲ್ಲಿ ಪ್ರಕಟವಾದ ಸಂಪುಟದ ಸಂಪಾದಕ ಕ್ಯಾಪೆಲ್ ಎಂಬವರೂ ನಾಟಕಗಳ ಪಾಠವನ್ನು ಗಣನೀಯವಾಗಿ, ನೆಚ್ಚುವಹಾಗೆ, ಶುದ್ಧಿಗೊಳಿಸಿದರು. ಆಧುನಿಕರಲ್ಲಿ ಡೀಲಿಯಸ್, ಡೈಸ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯ ನಿಯಮಿಸಿದ ಸಂಪಾದಕರು ಈ ದಿಸೆಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿ ಕೆಲಸಮಾಡಿ ದ್ದಾರೆ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ 1905ರಲ್ಲಿ ಪ್ರಕಟಿಸಿದ ಸಂಪೂರ್ಣಕೃತಿಗಳ(ಕಾವ್ಯ, ನೀಳ್ಗವನಗಳೂ ಸೇರಿದಂತೆ) ಸಂಪುಟವನ್ನು 1894ರ ವೇಳೆಗೆ ಡಬ್ಲ್ಯೂ. ಜೆ. ಕೇಗ್ ಎಂಬ ವಿದ್ವಾಂಸ ಎಚ್ಚರಿಕೆಯಿಂದ ಪರಿಷ್ಕರಿಸಿ ಸರಿಯಾದ ಪಾಠವೆಂದು ನಿಷ್ಕರ್ಷೆಮಾಡಿ ಸಿದ್ಧಗೊಳಿಸಿದ್ದ. ಇದೇ ಬಗೆಯ ಸಮಗ್ರ ಕೃತಿಗಳ (ನಾಟಕಗಳು, ಕಾವ್ಯಗಳು, ಸಾನೆಟ್ ಹಾಗೂ ನೀಳ್ಗವನಗಳು ಸೇರಿದಂತೆ) ಪರಿಷ್ಕøತ ಸಂಪುಟವನ್ನು ಇಂಗ್ಲಿಷ್ ಲ್ಯಾಂಗ್ವೇಜ್ ಬುಕ್ ಸೊಸೈಟಿ, ಗ್ಲಾಸ್ಗೊ ವಿಶ್ವವಿದ್ಯಾಲಯದ ಇಂಗ್ಲಿಷ್ ಗೌರವ ಪ್ರಾಧ್ಯಾಪಕ ಪೀಟರ್ ಅಲೆಕ್ಸಾಂಡರ್‍ನ ಸಂಪಾದಕತ್ವದಲ್ಲಿ ಷೇಕ್‍ಸ್ಪಿಯರ್‍ನ ನಾಲ್ಕನೆಯ ಶತಾಬ್ದಿ ಸಂದರ್ಭದಲ್ಲಿ (1946) ಪ್ರಕಟಿಸಿತು.

	ಸರಿಸುಮಾರು 1880ರಿಂದಲೂ ಕನ್ನಡ ಭಾಷೆಯಲ್ಲಿ ಈತನ ನಾಟಕಗಳು ಕಾಣಿಸಿಕೊಂಡಿವೆ. ಮೊದಮೊದಲು ರೂಪಾಂತರವಾಗಿ, ಆನಂತರ ಭಾಷಾಂತರದಲ್ಲಿ. ಎಂ.ಎಲ್. ಶ್ರೀಕಂಠೇಶಗೌಡ ಹಾಗೂ ಬಸವಪ್ಪಶಾಸ್ತ್ರೀ ಈ ಹಾದಿಯಲ್ಲಿ ಮೊದಲು ನಡೆದವರು. ಕುವೆಂಪು ಅವರು ಬಿರುಗಾಳಿ ಮತ್ತು ರಕ್ತಾಕ್ಷಿ ನಾಟಕಗಳನ್ನು ಷೇಕ್‍ಸ್ಪಿಯರ್‍ನ ದ ಟೆಂಪೆಸ್ಟ್ ಮತ್ತು ಹ್ಯಾಮ್ಲೆಟ್ ನಾಟಕಗಳ ನೆರಳಿನಲ್ಲಿಯೇ ರಚಿಸಿದ್ದಾರೆ. ನವೋದಯದ ಅನೇಕ ಬರೆಹಗಾರರು ಷೇಕ್‍ಸ್ಪಿಯರ್‍ನನ್ನು ಅನುವಾದಿಸಿದ್ದಾರೆ. ಈಗಲೂ ಹೊಸ ಹೊಸ ಅನುವಾದಗಳು ನಡೆಯುತ್ತಿವೆ.						
			(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ